ಶನಿವಾರಸಂತೆ, ಫೆ. ೧೪: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಗ್ರಾಮೀಣ ಪ್ರದೇಶದ ಶಾಲೆ, ಸಮುದಾಯಭವನ, ದೇವಸ್ಥಾನಗಳ ಅಭಿವೃದ್ಧಿಗೆ ಸಹಾಯಧನ ನೀಡುವುದರ ಜತೆಗೆ ದುಶ್ಚಟ ದೂರ ಮಾಡಿ, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ನಿರ್ದೇಶಕ ಭಗವಾನ್ ಹೇಳಿದರು.
ಕೊಡ್ಲಿಪೇಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬೆಂಚ್-ಡೆಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವೀರಶೈವ ಸಮಾಜದ ನಿಕಟಪೂರ್ವ ಅಧ್ಯಕ್ಷ ಬಿ.ಕೆ. ಯತೀಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳು ಅಪಾಯದಲ್ಲಿದ್ದ ಸಮಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶಿಕ್ಷಕರ ವರ್ಗಾವಣೆ, ಬೆಂಚ್-ಡೆಸ್ಕ್ ವಿತರಣೆ ಮಾಡಿ ಬಡಜನತೆಯ ಶೈಕ್ಷಣಿಕ ಅಭಿವೃದ್ಧಿಗೆ ವೀರೇಂದ್ರ ಹೆಗಡೆಯವರು ಶ್ರಮಿಸಿದ್ದರು. ಅವರ ಸಮಾಜ ಸೇವೆ ಅನುಕರಣೀಯ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ್ ಮಾತನಾಡಿದರು.
ಸಮಿತಿ ಉಪಾಧ್ಯಕ್ಷೆ ಮಮತಾ, ಕೊಡ್ಲಿಪೇಟೆ ವಲಯ ಮೇಲ್ವಿಚಾರಕ ನಾಗರಾಜ್, ಕರವೇ ಉಪಾಧ್ಯಕ್ಷ ಕೆಂಚೇಶ್ವರ್, ಒಕ್ಕೂಟದ ಉಪಾಧ್ಯಕ್ಷೆ ಮಮತಾ, ಸೇವಾಪ್ರತಿನಿಧಿ ರಾಣಿ, ಮುಖ್ಯಶಿಕ್ಷಕಿ ಆಶಾ, ಹಿರಿಯ ಶಿಕ್ಷಕಿ ಗೌರಮ್ಮ, ಸಹಶಿಕ್ಷಕರು ಹಾಜರಿದ್ದರು.