ಗೋಣಿಕೊಪ್ಪಲು, ಫೆ.೧೪: ಅಮಾಯಕ ಮಹಿಳೆಯ ಜೀವ ಬಲಿ ತೆಗೆದುಕೊಂಡ ಒಂಟಿ ಸಲಗವನ್ನು ಸೆರೆ ಹಿಡಿಯಲು ಸರ್ಕಾರದ ಅನುಮತಿ ದೊರೆತ್ತಿದ್ದು ತಾ. ೧೫ ರಂದು (ಇಂದು) ಕಾಡಾನೆ ಕಾರ್ಯಾಚರಣೆ ನಡೆಯಲಿದೆ ಎಂದು ಮಡಿಕೇರಿ ಸಿಸಿಎಫ್ ಮಾಲತಿ ಪ್ರಿಯ ‘ಶಕ್ತಿ'ಗೆ ತಿಳಿಸಿದರು.

ಚೆನ್ನಂಗೊಲ್ಲಿ ನಿವಾಸಿ ಅಮಾಯಕ ಮಹಿಳೆ ಜಾನಕಿಯನ್ನು ಕಾಡಾನೆಯು ಗುರುವಾರ ಸಂಜೆಯ ವೇಳೆ ಚೆÀನ್ನಂಗೊಲ್ಲಿ ಬಳಿಯ ಕಾಫಿ ತೋಟದಲ್ಲಿ ದಾಳಿ ನಡೆಸಿ ಬಲಿ ತೆಗೆದುಕೊಂಡಿತ್ತು.

ಶಾಸಕ ಎ.ಎಸ್. ಪೊನ್ನಣ್ಣ ತಕ್ಷಣ ಅಧಿಕಾರಿಗಳೊಂದಿಗೆ ಚರ್ಚಿಸಿ ಆನೆ ಸೆರೆಗೆ ಕ್ರಮಕೈಗೊಳ್ಳಲು ಸೂಚಿಸಿ ಉನ್ನತಾಧಿಕಾರಿಗಳಿಂದ ಅನುಮತಿ ಕುರಿತು ಮಾತುಕತೆ ನಡೆಸಿದ್ದರು. ಈ ಬಗ್ಗೆ ವೀರಾಜಪೇಟೆ ಡಿಸಿಎಫ್ ಜಗನ್ನಾಥ್ ಹಾಗೂ ಮಡಿಕೇರಿಯ ಅಧಿಕಾರಿಗಳು ಪತ್ರ ಮುಖೇನ ವರದಿ ನೀಡಿದ್ದರು.

ಶುಕ್ರವಾರ ಸಂಜೆಯ ವೇಳೆ ಕಾಡಾನೆ ಸೆರೆಗೆ ಅನುಮತಿ ದೊರೆತ್ತಿದ್ದು, ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ತಂಡ ಕಾಡಾನೆ ಸೆರೆಗೆ ಅಗತ್ಯ ಕ್ರಮ ಕೈಗೊಂಡಿದೆ. ಶನಿವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆಯಲಿದೆ. ಕಾಡಾನೆ ಮಾಹಿತಿ ಹಾಗೂ ಲಭ್ಯವಿರುವ ಸ್ಥಳ ಮಾಹಿತಿ ಕೂಡ ಲಭ್ಯವಿದೆ ಸಾರ್ವಜನಿಕರು ಸಹಕಾರ ನೀಡುವಂತೆ ಸಿಸಿಎಫ್ ಮಾಲತಿ ಪ್ರೀಯ ಶಾಸಕ ಎ.ಎಸ್.ಪೊನ್ನಣ್ಣನವರ ಸಮ್ಮುಖದಲ್ಲಿ ತಿಳಿಸಿದರು. ಕಾಡಾನೆ ಸೆರೆಗೆ ಅಗತ್ಯ ಇರುವ ಸಾಕಾನೆಗಳು ಹಾಗೂ ವೈದ್ಯರ ತಂಡ ಹಾಗೂ ಸಿಬ್ಬಂದಿಗಳ ತಂಡ ತಯಾರಾಗಿದೆ ಎಂಬ ಮಾಹಿತಿ ತಿಳಿಸಿದರು.

ಈ ವೇಳೆ ವನ್ಯಜೀವಿ ಮಂಡಳಿಯ ಸದಸ್ಯರಾದ ಸಂಕೇತ್ ಪೂವಯ್ಯ, ನಾಗರಹೊಳೆ ವನ್ಯಜೀವಿ ವಿಭಾಗದ ನಿರ್ದೇಶಕಿ ಸೀಮಾ, ವೀರಾಜಪೇಟೆ ಡಿಸಿಎಫ್ ಜಗನ್ನಾಥ್, ತಿತಿಮತಿ ಎಸಿಎಫ್ ಗೋಪಾಲ್, ಆರ್.ಎಫ್.ಒ ಗಂಗಾಧರ್ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

- ಹೆಚ್.ಕೆ.ಜಗದೀಶ್