*ಸಿದ್ದಾಪುರ, ಫೆ. ೫: ನೂತನವಾಗಿ ರಚನೆಯಾದ ಕುಶಾಲನಗರ ತಾಲೂಕು ಕಚೇರಿಯಲ್ಲಿ ಕಡತಗಳ ವಿಲೇವಾರಿ ವಿಳಂಬವಾಗುತ್ತಿದ್ದು, ದೂರದ ಗ್ರಾಮಗಳ ಅರ್ಜಿದಾರರು ನಿತ್ಯ ಕಚೇರಿಗೆ ಬಂದು ಹೋಗುವ ಪರಿಸ್ಥಿತಿ ಉದ್ಭವಿಸಿದೆ.
ನೆಲ್ಲಿಹುದಿಕೇರಿ ಸುತ್ತಮುತ್ತಲ ಗ್ರಾಮಗಳ ಜನರು ಆರ್ಟಿಸಿಯಲ್ಲಿ ಬೆಳೆಯ ತಿದ್ದುಪಡಿ, ಪೌತಿ ಖಾತೆ, ಕಂದಾಯ ನಿಗದಿ ಸೇರಿದಂತೆ ವಿವಿಧ ಅರ್ಜಿಗಳ ವಿಲೇವಾರಿಗೆ ಈ ಹಿಂದೆ ಸೋಮವಾರಪೇಟೆ ತಾಲೂಕು ಕಚೇರಿಯನ್ನು ಅವಲಂಬಿಸಿದ್ದರು. ಸೋಮವಾರಪೇಟೆ ದೂರದ ಪ್ರದೇಶವಾಗಿರುವುದರಿಂದ ಕಚೇರಿ ಹತ್ತಿರದಲ್ಲಿದ್ದರೆ ಉತ್ತಮ ಎನ್ನುವ ಬೇಡಿಕೆ ಕೇಳಿ ಬಂತು. ಇದೇ ಸಂದರ್ಭ ಸರಕಾರ ಕುಶಾಲನಗರ ನೂತನ ತಾಲೂಕನ್ನು ಘೋಷಿಸಿ ಕಚೇರಿಯನ್ನು ಕೂಡ ನೀಡಿತು. ಇದಾದ ನಂತರ ನೆಲ್ಲಿಹುದಿಕೇರಿ ಸುತ್ತಮುತ್ತಲ ಗ್ರಾಮಗಳ ಅರ್ಜಿದಾರರು ಕುಶಾಲನಗರ ಕಚೇರಿಗೆ ಒಳಪಟ್ಟರು. ಸೋಮವಾರಪೇಟೆಗಿಂತ ಕುಶಾಲನಗರ ಸಮೀಪದಲ್ಲಿದೆ, ಇನ್ನು ಮುಂದೆ ಅರ್ಜಿಗಳ ವಿಲೇವಾರಿ ಶೀಘ್ರವಾಗುತ್ತದೆ ಎಂದು ಜನರು ಹರ್ಷ ವ್ಯಕ್ತಪಡಿಸಿದ್ದರು. ಆದರೆ ಇದೀಗ ಆರ್ಟಿಸಿಯಲ್ಲಿ ಬೆಳೆಯ ತಿದ್ದುಪಡಿ, ಪೌತಿ ಖಾತೆ, ಕಂದಾಯ ನಿಗದಿಗೆ ಸಂಬAಧಿಸಿದ ಅರ್ಜಿದಾರರು ಕಡತ ವಿಲೇವಾರಿಯಾಗದೆ ನಿತ್ಯ ಕುಶಾಲನಗರ ತಾಲೂಕು ಕಚೇರಿಗೆ ಅಲೆದಾಡುವಂತಾಗಿದೆ. ಅರ್ಜಿ ಸಲ್ಲಿಸಿ ೭-೮ ತಿಂಗಳೇ ಕಳೆದಿದ್ದರೂ ಯಾವುದೂ ವಿಲೇವಾರಿಯಾಗುತ್ತಿಲ್ಲವೆಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ನಾಡ ಕಚೇರಿಯಿಂದ ತಾಲೂಕು ಕಚೇರಿಗೆ ಕಡತ ಹೋಗಬೇಕಾದರೆ ಬ್ರಹ್ಮಾಂಡ ಲಂಚಾವತಾರವನ್ನು ದಾಟಿಯೇ ಹೋಗಬೇಕು. ಹಣ ನೀಡದೆ ಯಾವ ಅರ್ಜಿಯೂ ವಿಲೇವಾರಿಯಾಗುವುದಿಲ್ಲ. ನಿವೇಶನಗಳಿಗಾಗಿ ಭೂಪರಿವರ್ತನೆ ಮಾಡುವ ಕಡತಗಳನ್ನು ಮಾತ್ರ ಶೀಘ್ರ ವಿಲೇವಾರಿ ಮಾಡುವುದರಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಲ್ಲೀನರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲೂಕು ಕಚೇರಿಯ ಅವ್ಯವಸ್ಥೆಯನ್ನು ಸರಿಪಡಿಸಲು ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ದಿಢೀರ್ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದಾರೆ.