ಮಡಿಕೇರಿ, ಫೆ. ೪: ಗೋಣಿಕೊಪ್ಪ ಕ್ಯಾಲ್ಸ್ ಶಾಲೆಯ ೨೦೨೪-೨೫ನೇ ಸಾಲಿನ ಹತ್ತನೇ ತರಗತಿಯ ಪದವಿ ಪ್ರಧಾನ ಸಮಾರಂಭವು ಶಾಲೆಯ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಸರಕಾರದ ವಿಧಾನಪರಿಷತ್ತಿನ ಅಧ್ಯಕ್ಷರಾದ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಬದುಕಿನಲ್ಲಿ ದೈಹಿಕ ಶಿಕ್ಷಣ ಅತೀ ಮುಖ್ಯ ಎಂದ ಅವರು, ಮೊಬೈಲ್ ಬಳಕೆ ಎಷ್ಟು ಮಾರಕ ಎಂಬುದನ್ನು ವಿವರಿಸಿ ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯಾರ್ಥಿಗಳ ಬದುಕಿಗೆ ಎಷ್ಟು ಪೂರಕ ಎನ್ನುವುದನ್ನು ಉದಾಹರಣೆ ಸಮೇತ ವಿವರಿಸಿದರು. ಸರಕಾರದಿಂದಲೂ ಸಾಧ್ಯವಾಗದ ಕಾರ್ಯವನ್ನು ದತ್ತ ಕರುಂಬಯ್ಯ ಹಾಗೂ ಅಶ್ವಿನಿ ನಾಚಪ್ಪ ದಂಪತಿ ಮಾಡಿದ್ದಾರೆ. ಅವರ ಈ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದು ಪ್ರಶಂಶಿಸಿದರು.

ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಗಳ ಕುರಿತು ನೀಡಿದ ಮನವಿ ಪತ್ರಕ್ಕೆ ಸ್ಪಂದಿಸಿದ ಅವರು, ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕರಾದ ದತ್ತ ಕರುಂಬಯ್ಯ, ಅಶ್ವಿನಿ ನಾಚಪ್ಪ, ವೀರಾಜಪೇಟೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆನಂದ್ ಟಿ.ಜೆ., ಶಾಲೆಯ ಪ್ರಾಂಶುಪಾಲರಾದ ಗೌರಮ್ಮ ನಂಜಪ್ಪ ಹಾಗೂ ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.