ಮಡಿಕೇರಿ, ಫೆ. ೪: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏಪ್ರಿಲ್ ೧೭ ರಿಂದ ಮೇ ೪ರ ವರೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗೌಡ ಪ್ರೀಮಿಯರ್ ಲೀಗ್ ಲೆದರ್ ಬಾಲ್ ಟಿ-೨೦ ಕ್ರಿಕೆಟ್ ಪಂದ್ಯಾವಳಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ, ಕೊಡಗು ಗೌಡ ಯುವ ವೇದಿಕೆ ಕಳೆದ ಹಲವಾರು ವರ್ಷಗಳಿಂದ ಗೌಡ ಜನಾಂಗ ಬಾಂಧವರಿಗೆ ಕ್ರೀಡಾಕೂಟ ಮತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ೨೦೨೩ರಲ್ಲಿ ಮೊದಲ ಬಾರಿಗೆ ಲೆದರ್ ಬಾಲ್ ಟೂರ್ನಿ ಆಯೋಜಿಸಿ ಜನಾಂಗದ ಯುವ ಪೀಳಿಗೆಗೆ ಆಸಕ್ತಿ ತುಂಬಲಾಯಿತು. ಪಟ್ಟಣಕ್ಕೆ ಸೀಮಿತವಾಗಿದ್ದ ಲೆದರ್‌ಬಾಲ್ ಕ್ರಿಕೆಟ್ ಇದೀಗ ಹಲವಾರು ಗ್ರಾಮಗಳಿಗೆ ವಿಸ್ತರಿಸಿಕೊಂಡಿದೆ. ಜನಾಂಗದ ಯುವ ಪೀಳಿಗೆ ಲೆದರ್ ಬಾಲ್ ಕ್ರಿಕೆಟ್ ಅನ್ನು ವೃತ್ತಿಪರವಾಗಿ ಅಳವಡಿಸಿ ಕೊಂಡಿರುವುದು ಗಮನಾರ್ಹ ಎಂದರು.

ಈ ಬಾರಿ ಒಟ್ಟು ೧೦ ರಿಂದ ೧೨ ಫ್ರಾಂಚೈಸಿಗಳು ಭಾಗವಹಿಸುತ್ತಿವೆ. ಟಿ-೨೦ ಮಾದರಿಯ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಲಾಗುವುದು. ಕೊಡಗು ಮತ್ತು ದಕ್ಷಿಣ ಕನ್ನಡ ಮೂಲದ ಎಲ್ಲಾ ಒಕ್ಕಲಿಗ ಗೌಡ ಜನಾಂಗದವರಿಗೆ ಆಡಲು ಅವಕಾಶ ಕಲ್ಪಿಸಲಾಗುತ್ತಿದೆ. ಒಕ್ಕಲಿಗ ಗೌಡರಲ್ಲಿ ಹಲವು ಉಪಜಾತಿಗಳು ಇದ್ದು, ಕೊಡಗು ಮತ್ತು ದ.ಕ ಜಿಲ್ಲೆಯಲ್ಲಿ ಮುಖ್ಯವಾಗಿ ಕನ್ನಡ, ಅರೆಭಾಷೆ ಮತ್ತು ತುಳುಭಾಷೆ ಮಾತನಾಡುತ್ತಾರೆ. ಈ ವರ್ಷ ಎರಡು ಜಿಲ್ಲೆಗಳ ಒಕ್ಕಲಿಗ ಗೌಡರಿಗೆ ಫ್ರಾಂಚೈಸಿ ಹಾಗೂ ಆಟಗಾರರಿಗೆ ಭಾಗವಹಿಸಲು ಅವಕಾಶ ಇರುತ್ತದೆ. ಮುಂದಿನ ವರ್ಷಗಳಲ್ಲಿ ಸರಕಾರದಿಂದ ಸಾಕಷ್ಟು ಅನುದಾನ ದೊರಕಿದ್ದಲ್ಲಿ ಮುಂದೆ ಎಲ್ಲಾ ಜಿಲ್ಲೆಗಳ ಒಕ್ಕಲಿಗರನ್ನು ಒಳಗೊಳ್ಳುವ ಚಿಂತನೆಗಳಿವೆ ಎಂದು ಹೇಳಿದರು.

ಈ ವರ್ಷದ ವಿಜೇತರಿಗೆ ರೂ. ೧.೭೫ ಲಕ್ಷ, ದ್ವಿತೀಯ ರೂ. ೭೫ ಸಾವಿರ, ತೃತೀಯ ರೂ. ೪೪ ಸಾವಿರ ನಗದು ಬಹುಮಾನ ಸೇರಿದಂತೆ ಆಕರ್ಷಕ ಟ್ರೋಫಿ ನೀಡಲು ನಿರ್ಧರಿಸಲಾಗಿದೆ. ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ೩೦೦ ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ ಎಂದರು. ಲೆದರ್ ಬಾಲ್ ಕ್ರೀಡಾಕೂಟದಲ್ಲಿ ೧೨ ವರ್ಷದ ಮೇಲಿನ ಯುವಕ, ಯುವತಿಯರು ಹಾಗೂ ಪುರುಷ ಮತ್ತು ಮಹಿಳ ಆಟಗಾರರಿಗೆ ಆನ್‌ಲೈನ್ ಅಫ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ. ಆಟಗಾರರು ಅಪ್ಲಿಕೇಶನ್ ಜೊತೆಗೆ ಜಾತಿ ಪ್ರಮಾಣ ಪತ್ರವನ್ನು ಒದಗಿಸಬೇಕು. ವಿವರಗಳಿಗೆ ೯೯೭೨೩೭೬೧೫೧, ೯೯೮೦೦೦೪೩೭೪, ೭೦೧೯೬೭೧೧೩೦ ಸಂಖ್ಯೆ ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಕುಟ್ಟನ ಪ್ರಶಾಂತ್ ತಿಮ್ಮಯ್ಯ, ಶಿಸ್ತು ಸಮಿತಿ ಅಧ್ಯಕ್ಷ ನವೀನ್ ದೇರಳ, ವೇದಿಕೆಯ ಸಹಕಾರ್ಯದರ್ಶಿ ಕೆದಂಬಾಡಿ ಕಾಂಚನ ಗೌಡ, ನಿರ್ದೇಶಕ ಕೊಂಬಾರನ ರಂಜು ಹಾಜರಿದ್ದರು.