ಮಡಿಕೇರಿ, ಫೆ. ೪: ಬಾಂಧವ್ಯ ವೃದ್ಧಿ, ಒಗ್ಗಟ್ಟು ಮೂಡಲು ಕ್ರೀಡಾಕೂಟಗಳು ಸಹಕಾರಿ ಎಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ, ನಗರಸಭೆ ಸದಸ್ಯ ರಾಜೇಶ್ ಯಲ್ಲಪ್ಪ ಪ್ರತಿಪಾದಿಸಿದರು.
ಸವಿತಾ ಮಹರ್ಷಿ ಜಯಂತಿ ಅಂಗವಾಗಿ ಮಡಿಕೇರಿ ತಾಲೂಕು ಸವಿತಾ ಸಮಾಜ ವತಿಯಿಂದ ನಗರದ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸವಿತಾ ಸಮಾಜ ಸಂಘಟನಾತ್ಮಕಗೊಳ್ಳುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಕ್ರೀಡಾಕೂಟಗಳು ದೈಹಿಕ ಸದೃಢತೆಯೊಂದಿಗೆ ಮಾನಸಿಕ ಆರೋಗ್ಯ ನೀಡುತ್ತದೆ. ಪ್ರತಿಯೊಬ್ಬರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದ ಅವರು, ಜಿಲ್ಲೆಯಲ್ಲಿ ರಕ್ತದ ಅಭಾವ ಹಿನ್ನೆಲೆ ಶಿಬಿರದ ಮೂಲಕ ಸಂಘ ಸಮಾಜಮುಖಿಯಾಗಿ ತೊಡಗಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಎಚ್.ಟಿ. ಅನಿಲ್ ಮಾತನಾಡಿ, ಸವಿತಾ ಮಹರ್ಷಿ ಮಹಾನ್ ವ್ಯಕ್ತಿಯಾಗಿದ್ದು, ಸವಿತಾ ಸಮಾಜದವರು ಸಮಾಜಕ್ಕೆ ಅತ್ಯಂತ ಬೇಕಾದವರಾಗಿದ್ದಾರೆ. ಕೋವಿಡ್-೧೯ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಜನರಿಗೆ ನೆರವಾಗುವ ಮೂಲಕ ತಮ್ಮ ಕಾರ್ಯಕ್ಷಮತೆಯನ್ನು ಸವಿತಾ ಸಮಾಜ ತೋರಿದೆ ಎಂದ ಅವರು, ತಂತ್ರಜ್ಞಾನ ಎಷ್ಟೆ ಮುಂದುವರೆದರೂ ರಕ್ತಕ್ಕೆ ಪರ್ಯಾಯ ಅಂಶವಿಲ್ಲ. ರಕ್ತನಿಧಿ ಕೇಂದ್ರದಲ್ಲಿ ಅಗತ್ಯಕ್ಕೆ ತಕ್ಕ ರಕ್ತಸಂಗ್ರಹವಾಗುತ್ತಿಲ್ಲ. ಇದನ್ನು ಮನಗಂಡು ಶಿಬಿರ ಆಯೋಜಿಸಿರುವುದು ಸಮಾಜಕ್ಕೆ ಮಾದರಿಯಾಗಿದೆ. ಪ್ರತಿ ವರ್ಷ ಈ ರೀತಿ ಕ್ರೀಡಾಕೂಟ ನಡೆಯಲಿ ಎಂದು ಆಶಿಸಿದರು.
ತಾಲೂಕು ಸವಿತಾ ಸಮಾಜ ಅಧ್ಯಕ್ಷ ಎಂ.ಟಿ. ಮಧು ಪ್ರಾಸ್ತಾವಿಕವಾಗಿ ಮಾತನಾಡಿ, ೨ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಸವಿತಾ ಸಮಾಜ ತನ್ನ ಕೆಲಸದ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದೆ. ಸವಿತಾ ಮಹರ್ಷಿ ಸವಿತಾ ಸಮಾಜದ ಮೂಲಪುರಷರಾಗಿದ್ದಾರೆ ಎಂದರು.
ತಾಲೂಕು ಸವಿತಾ ಸಮಾಜ ಕ್ರೀಡಾ ಸಮಿತಿ ಅಧ್ಯಕ್ಷ ಮಧು ಚೆಟ್ಟಿಮಾನಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ವೈದ್ಯೆ ಡಾ. ತೇಜಸ್ವಿನಿ, ಸವಿತಾ ಸಮಾಜ ಜಿಲ್ಲಾಧ್ಯಕ್ಷ ಕೆ.ಎಸ್. ದೊರೇಶ್, ಮಹಿಳಾ ಘಟಕ ತಾಲೂಕು ಅಧ್ಯಕ್ಷೆ ಆರ್.ಬಿ. ವಸಂತಿ, ಜಿಲ್ಲಾ ಸವಿತಾ ಸಮಾಜ ಗೌರವಾಧ್ಯಕ್ಷೆ ಸುಂದರಮ್ಮ, ತಾಲೂಕು ಸವಿತಾ ಸಮಾಜ ಗೌರವಾಧ್ಯಕ್ಷ ಈರಪ್ಪ, ಕೂರ್ಗ್ ಬ್ಲಡ್ ಫೌಂಡೇಶನ್ ಅಧ್ಯಕ್ಷ ವಿನು ಹಾಜರಿದ್ದರು.
ಮಹಿಳಾ ಘಟಕದ ಸದಸ್ಯರು ಪ್ರಾರ್ಥಿಸಿ, ಮಧು ಸ್ವಾಗತಿಸಿ, ಅವಿನಾಶ್ ನಿರೂಪಿಸಿ, ವಂದಿಸಿದರು.
ಪ್ರದರ್ಶನ ಪಂದ್ಯ
ಕೊಡಗು ಪ್ರೆಸ್ ಕ್ಲಬ್ ಹಾಗೂ ಸವಿತಾ ಸಮಾಜ ತಂಡದ ನಡುವೆ ನಡೆದ ಪ್ರದರ್ಶನ ಪಂದ್ಯದಲ್ಲಿ ಸವಿತಾ ಸಮಾಜ ಗೆಲುವು ದಾಖಲಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪ್ರೆಸ್ ಕ್ಲಬ್ ನಿಗದಿತ ೫ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೫೩ ರನ್ ಕಲೆ ಹಾಕಿತು. ತಂಡದ ಪರ ಮಂಜು ಸುವರ್ಣ ೧೩ ಎಸೆತದಲ್ಲಿ ೧ ಸಿಕ್ಸರ್ ೪ ಬೌಂಡರಿಯೊAದಿಗೆ ೨೬ ರನ್‌ಗಳಿಸಿ ತಂಡಕ್ಕೆ ನೆರವಾದರು. ಗುರಿ ಬೆನ್ನಟ್ಟಿದ ಮಡಿಕೇರಿ ಸವಿತಾ ಸಮಾಜ ತಂಡ ೪.೩ ಓವರ್‌ನಲ್ಲಿ ೫ ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ತಂಡದ ಪರ ಚರಣ್ ೧೯ ರನ್ ಕಲೆ ಹಾಕಿದರು.