ಶನಿವಾರಸಂತೆ, ಫೆ. ೧: ರಸ್ತೆ ಅಗಲೀಕರಣ ಕಾಮಗಾರಿಗೆ ಮರಗಳನ್ನು ತೆರವುಗೊಳಿಸದಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಶನಿವಾರಸಂತೆ, ದುಂಡಳ್ಳಿ, ಹಾಲ್ಕೆನೆ, ತೋಯಳ್ಳಿ, ಮಾದ್ರೆ, ಬಿಳಹ, ಶಿರಹ, ಬೆಂಬಳೂರು, ಯಸಳೂರು, ಕ್ಯಾತೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಬೆಳಿಗ್ಗೆ ೧೦.೩೦ ಗಂಟೆಯಿAದ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಶನಿವಾರಸಂತೆ ಪೊಲೀಸ್ ಠಾಣೆಗೆ ಪ್ರತಿಭಟನೆ ಕುರಿತು ಸಲ್ಲಿಸಿದ ಮನವಿಯಲ್ಲಿ, ಚಂಗಡಹಳ್ಳಿ ಮುಖ್ಯರಸ್ತೆಯಿಂದ ದುಂಡಳ್ಳಿ ಮಾರ್ಗವಾಗಿ, ಯಸಳೂರು ಕ್ಯಾತೆ ಮಾರ್ಗವಾಗಿ ಕೊಡ್ಲಿಪೇಟೆಗೆ ರಸ್ತೆ ಕಾಮಗಾರಿ ೨೦೨೩ ರಿಂದ ಪ್ರಾರಂಭವಾಗಿದ್ದರೂ ಈವರೆಗೂ ಅರಣ್ಯ ಇಲಾಖೆ ಬೇಜವಾಬ್ದಾರಿಯಿಂದ ಮರಗಳನ್ನು ತೆರವುಗೊಳಿಸದ ಕಾರಣ ರಸ್ತೆ ಕೆಲಸ ವಿಳಂಬವಾಗಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮತ್ತು ಅರಣ್ಯ ಇಲಾಖೆಯವರಿಗೆ ದೂರು ಸಲ್ಲಿಸಿದ್ದು ತಹಶೀಲ್ದಾರ್ ಬಂದು ಜಾಗವನ್ನು ಪರಿಶೀಲಿಸಿ ಮರ ತೆರವುಗೊಳಿಸುವುದಾಗಿ ಆಶ್ವಾಸನೆ ನೀಡಿ ೮ ತಿಂಗಳಾದರೂ ಪೂರ್ಣವಾಗಿರುವುದಿಲ್ಲ ಎಂದು ದೂರಿದ್ದಾರೆ.
ರಸ್ತೆ ಅಗಲೀಕರಣ ಕಾಮಗಾರಿ ವಿಳಂಬದಿAದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಮರವನ್ನು ತೆರವುಗೊಳಿಸಲು ಅನುಮತಿ ನೀಡಲು ಅರಣ್ಯ ಇಲಾಖೆ ಮೇಲಾಧಿಕಾರಿಗಳು ಬರಲೇಬೇಕು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನ್ಯಾಯ ಬೇಕು. ಇಲ್ಲವಾದಲ್ಲಿ ಮುಂದೆ ಅಧಿಕಾರಿಗಳ ದಿಗ್ಬಂಧನ ಹಾಗೂ ರಸ್ತೆ ತಡೆ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.
ಸ್ಥಳದಲ್ಲಿದ್ದ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪೂಜಾ ಶ್ರೀ, ಉಪ ವಲಯ ಅರಣ್ಯಾಧಿಕಾರಿ ಗಳಾದ ಗೋವಿಂದ್ ರಾಜ್, ವಿಕ್ರಂ ಹಾಗೂ ಲೋಕೋಪಯೋಗಿ ಇಲಾಖೆ ಸಹಾಯಕ ಕಿರಿಯ ಅಭಿಯಂತರ ವೆಂಕಟೇಶ್ ನಾಯಕ ಅವರ ಜತೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು.
ಪ್ರತಿಭಟನೆಗೆ ಮಣಿದ ಅಧಿಕಾರಿಗಳು, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಒಂದು ವಾರದೊಳಗೆ ಮರವನ್ನು ತೆರವುಗೊಳಿಸಲು ಅನುಮತಿ ಪಡೆದು, ರಸ್ತೆ ಕಾಮಗಾರಿ ಚಾಲನೆಗೆ ಅನುವುಮಾಡಿಕೊಡುವುದಾಗಿ ಲಿಖಿತ ಹೇಳಿಕೆ ನೀಡಿದರು.
ಪ್ರತಿಭಟನಾಕಾರರ ದೂರಿಗೆ ಸ್ಪಂದಿಸಿದ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಮಾತನಾಡಿ, ಮುಂದಿನ ತಾ.೭ರ ಒಳಗೆ ಅರಣ್ಯ ಇಲಾಖೆಯಿಂದ ಮರ ತೆರವಿಗೆ ಹಾಗೂ ರಸ್ತೆ ಕಾಮಗಾರಿ ಚಾಲನೆಗೆ ಅನುಮತಿ ದೊರೆಯದಿದ್ದರೆ ರಸ್ತೆ ತಡೆಗೆ ಅನುಮತಿ ಕೊಡಿಸುವುದಾಗಿ ತಿಳಿಸಿದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆ ಸ್ಥಗಿತಗೊಳಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಮುಖಂಡರಾದ ಎಸ್.ಎನ್. ರಘು, ರಂಗರಾಜ್, ಮಿಥುನ್, ಸುರೇಶ್, ಗಣೇಶ್, ಕೆ.ಸಿ. ಗಿರೀಶ್, ಯೋಗೇಂದ್ರ, ನಾಗರಾಜ್, ರಮೇಶ್, ಸಂತೋಷ್, ಚಂದ್ರಣ್ಣ ವಹಿಸಿದ್ದರು.
ಪಿಎಸ್‌ಐ ಎಚ್.ವೈ. ಚಂದ್ರ, ಎಎಸ್‌ಐಗಳಾದ ಉತ್ತಪ್ಪ, ಶಶಿಧರ್, ಸಿಬ್ಬಂದಿ ಸಂತೋಷ್, ಪ್ರದೀಪ್ ಕುಮಾರ್, ಗಣೇಶ್, ರಘು ಸ್ಥಳದಲ್ಲಿ ಹಾಜರಿದ್ದು ಕಾನೂನು ಸುವ್ಯವಸ್ಥೆ ಕಾಪಾಡಿದರು. ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.