ಪೊನ್ನಂಪೇಟೆ, ಫೆ. ೧: ಪೊನ್ನಂಪೇಟೆ ಬಸ್ ನಿಲ್ದಾಣದ ಸಮೀಪ ಪೂವಪ್ಪ ಕಾಂಪ್ಲೆಕ್ಸ್ ನಲ್ಲಿರುವ ಹೊಟೇಲ್‌ನವರು ಹೊಟೇಲ್‌ನ ಮುಂಭಾಗದಲ್ಲಿ ಶವರ್ಮ ತಯಾರಿಸಿ ಮಾರಾಟ ಮಾಡುತ್ತಿದ್ದು, ಬೀದಿನಾಯಿಗಳು ಶವರ್ಮ ಮಾಡುವ ಯಂತ್ರದ ಮೇಲೆ ಇಟ್ಟಿರುವ ಆಹಾರ ಪದಾರ್ಥವನ್ನು ತಿನ್ನುತ್ತಿರುವ ದೃಶ್ಯ ಸಾರ್ವಜನಿಕರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜ. ೩೧ ರಂದು ಈ ಘಟನೆ ನಡೆದಿದ್ದು, ಈ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಹೊಟೇಲ್ ಮಾಲೀಕÀರಿಗೆ ನೋಟೀಸ್ ನೀಡಲಾಗಿದ್ದು, ಶವರ್ಮ ಯಂತ್ರ ಇಟ್ಟಿರುವ ಸ್ಥಳವನ್ನು ಬದಲಾಯಿಸಿ, ಹೊಟೇಲ್‌ನಲ್ಲಿ ಶುಚಿತ್ವ ಕಾಪಾಡುವಂತೆ ತಿಳಿಸಲಾಗಿದೆ.

ಮತ್ತೊಮ್ಮೆ ಈ ರೀತಿಯ ಘಟನೆ ಮರುಕಳಿಸಿದಲ್ಲಿ ಕರ್ನಾಟಕ ಪೌರಸಭೆಗಳ ಅಧಿನಿಯಮ ೧೯೬೪ರ ಕಾಯ್ದೆ ಅನ್ವಯ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.