ಪೊನ್ನಂಪೇಟೆ, ಜ. ೨೭ : ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಅಲ್ಪಸಂಖ್ಯಾತ ಮತದಾರರನ್ನು ಹೊಂದಿರುವ ವೀರಾಜಪೇಟೆ ಬ್ಲಾಕ್‌ನ ನೂತನ ಅಧ್ಯಕ್ಷರಾಗಿ ಅಲ್ಪಸಂಖ್ಯಾತರನ್ನೇ ನೇಮಕಗೊಳಿಸಬೇಕು. ಅಲ್ಲದೆ ಮುಂಬರುವ ಜಿ. ಪಂ. ಮತ್ತು ತಾ. ಪಂ. ಚುನಾವಣೆಯಲ್ಲಿ ಸ್ಪರ್ಧಿಸಲು ವೀರಾಜಪೇಟೆ ಬ್ಲಾಕ್‌ನ ಅರ್ಹ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ವೀರಾಜಪೇಟೆಯಲ್ಲಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತರ ಪ್ರಮುಖರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಕೋಳುಮಂಡ ರಫೀಕ್ ಅವರ ಅಧ್ಯಕ್ಷತೆಯಲ್ಲಿ ವೀರಾಜಪೇಟೆಯ ಪುರಭವನದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸೇರಿದ್ದ ಕಾಂಗ್ರೆಸ್ ಅಲ್ಪಸಂಖ್ಯಾತ ಪ್ರಮುಖರು ಚರ್ಚೆ ನಡೆಸಿ ಈ ನಿರ್ಣಯ ಕೈಗೊಂಡಿದ್ದಾರೆ. ಅಲ್ಲದೆ ಸಭೆಯ ನಿರ್ಣಯವನ್ನು ಕೂಡಲೇ ಶಾಸಕರಿಗೆ ಮತ್ತು ಡಿಸಿಸಿ ಅಧ್ಯಕ್ಷರಿಗೆ ಕಳುಹಿಸಿಕೊಡುವಂತೆಯೂ ತೀರ್ಮಾನಿಸಲಾಗಿದೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೋಳುಮಂಡ ರಫೀಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಐದು ವರ್ಷ ಪೂರ್ಣಗೊಂಡ ಕೊಡಗಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾವಣೆಗೊಳಿಸಲು ಕೆಪಿಸಿಸಿಯಿಂದ ನಿರ್ದೇಶನ ಬಂದಿದೆ ಎಂದು ಈಗಾಗಲೇ ಡಿಸಿಸಿ ಅಧ್ಯಕ್ಷರು ಘೋಷಿಸಿದ್ದಾರೆ. ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಪಟ್ಟಡ ರಂಜಿ ಪೂಣಚ್ಚ ಅವರ ಅವಧಿ ಇದೀಗ ಪೂರ್ಣಗೊಂಡಿದೆ. ಬ್ಲಾಕ್‌ನ ನೂತನ ಅಧ್ಯಕ್ಷರಾಗಿ ಅಲ್ಪಸಂಖ್ಯಾತರನ್ನೇ ನೇಮಿಸಬೇಕು ಎಂಬ ಗಟ್ಟಿ ಧ್ವನಿ ಕೇಳಿಬರುತ್ತಿದೆ. ಈ ಬೇಡಿಕೆಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸುವಂತಾಗಬೇಕು ಎಂದು ಹೇಳಿದರು.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಮತ್ತಷ್ಟು ಸಜ್ಜುಗೊಳಿಸಬೇಕಾಗಿದೆ. ಕಳೆದ ಚುನಾವಣೆಯಲ್ಲಿ ಪಕ್ಷದ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಅವಿರತವಾಗಿ ಕೆಲಸ ಮಾಡಿದ ಫಲವಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಕಾರಣವಾಯಿತು. ಅದರಲ್ಲೂ ಈ ಗೆಲುವಿನಲ್ಲಿ ವೀರಾಜಪೇಟೆ ಬ್ಲಾಕಿನ ಅಲ್ಪಸಂಖ್ಯಾತರ ಮತಗಳೇ ನಿರ್ಣಾಯಕವಾಗಿತ್ತು. ಇದನ್ನು ಪಕ್ಷದ ನಾಯಕರು ಪರಿಗಣಿಸಬೇಕಾಗಿದೆ ಎಂದು ಕೋಳುಮಂಡ ರಫೀಕ್ ಹೇಳಿದರು.

ಸಭೆಯಲ್ಲಿದ್ದ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಪಿ.ಎ. ಹನೀಫ್ ಮಾತನಾಡಿ, ಅಲ್ಪಸಂಖ್ಯಾತರು ಅತಿ ನಿರೀಕ್ಷೆಯಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬರುತ್ತಿದ್ದಾರೆ. ಪಕ್ಷದ ಸಾಂಪ್ರದಾಯಿಕ ಮತದಾರರಾಗಿರುವ ಅಲ್ಪಸಂಖ್ಯಾತರು ಯಾವುದೇ ಸಂದಿಗ್ಧತೆ ಪರಿಸ್ಥಿತಿಯಲ್ಲೂ ಪಕ್ಷವನ್ನು ಕೈ ಬಿಟ್ಟಿಲ್ಲ. ಈ ಕಾರಣದಿಂದಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಇಬ್ಬರು ಶಾಸಕರನ್ನು ಆರಿಸಿ ಕಳುಹಿಸುವುದರ ಮೂಲಕ ೨೫ ವರ್ಷಗಳ ಕನಸನ್ನು ನನಸು ಮಾಡಿದ್ದಾರೆ ಎಂದು ಹೇಳಿದರು.

ಇಡೀ ಜಿಲ್ಲೆಯಲ್ಲಿ ಅತಿ ಹೆಚ್ಚು ಅಲ್ಪಸಂಖ್ಯಾತ ಮತದಾರರನ್ನು ಹೊಂದಿರುವ ವೀರಾಜಪೇಟೆ ಬ್ಲಾಕ್‌ಗೆ ನೂತನ ಅಧ್ಯಕ್ಷರನ್ನಾಗಿ ಸಾಮಾಜಿಕ ನ್ಯಾಯದ ಆಧಾರದಲ್ಲಾದರೂ ಅಲ್ಪಸಂಖ್ಯಾತರನ್ನೇ ನೇಮಿಸಬೇಕು. ಜಿ. ಪಂ. ಮತ್ತು ತಾ. ಪಂ. ಚುನಾವಣೆಗೆ ವೀರಾಜಪೇಟೆ ಬ್ಲಾಕಿನ ಗೆಲ್ಲಬಹುದಾದ ಅರ್ಹ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಪಕ್ಷದ ಟಿಕೆಟ್ ನೀಡಬೇಕು. ಪಕ್ಷದಲ್ಲಿ ದಕ್ಕಬೇಕಾದ ಸೂಕ್ತ ಸ್ಥಾನಮಾನಗಳು ಅಲ್ಪಸಂಖ್ಯಾತ ಮುಖಂಡರ ನಡುವಿನ ಕೆಲವು ದೌರ್ಬಲ್ಯಗಳಿಂದಾಗಿ ತಪ್ಪಿ ಹೋಗಬಾರದು ಎಂದು ಸಭೆಯಲ್ಲಿ ಕಿವಿಮಾತು ಹೇಳಿದ ಪಿ.ಎ. ಹನೀಫ್, ಸಭೆಯಲ್ಲಿ ಅಲ್ಪಸಂಖ್ಯಾತ ಪ್ರಮುಖರು ತಮ್ಮ ಹಕ್ಕಾಗಿ ಮುಂದಿಟ್ಟಿರುವ ಈ ನ್ಯಾಯಯುತವಾದ ಬೇಡಿಕೆಗಳನ್ನು ಕೂಡಲೇ ಶಾಸಕರಿಗೆ ಮತ್ತು ಜಿಲ್ಲಾಧ್ಯಕ್ಷರಿಗೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದರು.

ವೀರಾಜಪೇಟೆ ತಾಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷರಾದ ಆರ್. ಕೆ. ಅಬ್ದುಲ್ ಸಲಾಂ ಮಾತನಾಡಿ, ವೀರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಅವರ ಕಾರ್ಯವೈಖರಿಯಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮುನ್ನೆಲೆಗೆ ಬಂದಿದೆ. ಪಕ್ಷ ಇನ್ನಷ್ಟು ಬಲಗೊಳ್ಳಲು ಕ್ಷೇತ್ರದ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಬೇಕಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ವೀರಾಜಪೇಟೆ ಪುರಸಭಾ ಸದಸ್ಯರಾದ ಮೊಹಮ್ಮದ್ ರಾಫಿ, ಕಳೆದ ಬಾರಿಯಷ್ಟೇ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಬ್ಲಾಕ್ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರ ಬದಲಿಗೆ ಸಾಮಾನ್ಯ ವರ್ಗಕ್ಕೆ ಹೋಗಿತ್ತು. ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಇದೀಗ ಅನಿವಾರ್ಯವಾಗಿರುವುದರಿಂದ ನೂತನ ಅಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡಬೇಕು ಎಂದು ಒಮ್ಮತದಿಂದ ನಿರ್ಣಯ ಕೈಗೊಳ್ಳಬೇಕಾಗಿದೆ ಎಂದರು.

ವೀರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಜಾನ್ಸನ್ ಮಾತನಾಡಿ, ಪ್ರತಿ ಚುನಾವಣೆಗಳಲ್ಲಿ ಅಲ್ಪಸಂಖ್ಯಾತ ಮುಖಂಡರು ಮತ್ತು ಕಾರ್ಯಕರ್ತರು ರಸ್ತೆಗಿಳಿದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಆದ್ದರಿಂದ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಲ್ಪಸಂಖ್ಯಾತರೇ ನೇಮಕವಾಗಬೇಕು ಎಂದು ಹೇಳಿದರು.

ವೀರಾಜಪೇಟೆ ಪುರಸಭಾ ಸದಸ್ಯರಾದ ಮತೀನ್ ಮಾತನಾಡಿ, ನೂತನ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ದೊರೆಯಬೇಕು ಎಂಬುದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಅಲ್ಪಸಂಖ್ಯಾತರೊಬ್ಬರಿಗೆ ಸ್ಥಾನ ದೊರೆತ ಬಳಿಕ ಯಾವುದೇ ಅಪಸ್ವರ ಕೇಳಿ ಬರಬಾರದು ಎಂದು ಎಚ್ಚರಿಸಿದರು. ಪಕ್ಷದ ಪ್ರಮುಖರಾದ ವೀರಾಜಪೇಟೆಯ ಏಜಾಸ್ ಅಹಮದ್ ಮಾತನಾಡಿ, ಹಿಂದೆ ಅಲ್ಪಸಂಖ್ಯಾತರಿಗೆ ಮೀಸಲಿದ್ದ ಅಧ್ಯಕ್ಷ ಸ್ಥಾನ ಕೈತಪ್ಪಲು ಅಲ್ಪಸಂಖ್ಯಾತ ಮುಖಂಡರೇ ಕಾರಣ ಎಂದು ಆರೋಪಿಸಿದರಲ್ಲದೆ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ಮೀಸಲು ಎಂಬುದನ್ನು ಮೊದಲು ಕೆಪಿಸಿಸಿಯಿಂದ ಘೋಷಣೆ ಮಾಡುವಂತೆ ಶಾಸಕರಲ್ಲಿ ಒತ್ತಡ ಹೇರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಸಭೆಯಲ್ಲಿದ್ದ ಮುಖಂಡರಾದ ಜೋಕಿಂ ರಾಡ್ರಿಗಸ್ ಮಾತನಾಡಿದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎ. ನಾಸರ್, ಪ್ರಮುಖರಾದ ಸಿದ್ದಾಪುರದ ಕೆ.ಸಿ. ಶುಕೂರ್, ವೀರಾಜಪೇಟೆಯ ಮಾರ್ವಿನ್ ಲೋಬೋ, ಬಿಳುಗುಂದ ವಲಯ ಕಾಂಗ್ರೆಸ್ ಅಧ್ಯಕ್ಷರಾದ ನಾಸಿರ್ ಮೊದಲಾದವರು ಮಾತನಾಡಿದರು. ಪುರಸಭಾ ಸದಸ್ಯರಾದ ಬೆನ್ನಿ ಆಗಸ್ಟಿನ್, ಆತಿಫ್ ಮನ್ನ, ಶಾಹುಲ್ ಹಮೀದ್, ಅಬ್ದುಲ್ ಜಲೀಲ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ಎಂ.ಎA. ಇಸ್ಮಾಯಿಲ್, ಡಿಸಿಸಿ ಸದಸ್ಯರಾದ ಅಂದಾಯಿ, ಆರ್ಜಿ ಗ್ರಾ. ಪಂ. ಅಧ್ಯಕ್ಷರಾದ ಫಾತಿಮಾ ಸುಲೇಮಾನ್, ಬೇಟೋಳಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ವರ್ಗೀಸ್, ಪ್ರಮುಖರಾದ ಶಬೀರ್, ಮರ್ಲಿನ್ ಲೋಬೋ, ಎಂ. ವೈ. ಆಲಿ, ಎಂ. ಎ. ಮೊಯ್ದು, ಮುನಾವರ್ ಸೇರಿದಂತೆ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು, ವಿವಿಧ ಗ್ರಾ. ಪಂ. ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.