ವೀರಾಜಪೇಟೆ, ಜ. ೨೭: ಜಿಲ್ಲಾ ಪಂಚಾಯಿತಿ , ತಾಲೂಕು ಪಂಚಾಯಿತಿ ವೀರಾಜಪೇಟೆ ಮತ್ತು ಗ್ರಾಮ ಪಂಚಾಯಿತಿ ಆರ್ಜಿ ಗ್ರಾಮದ ಸಂಯುಕ್ತ ಆಶ್ರಯದಲ್ಲಿ ೨೦೨೨-೨೩ ನೇ ಸಾಲಿನ ಮಕ್ಕಳ ಗ್ರಾಮ ಸಭೆಯು ಬೇಟೋಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಫಾತಿಮಾ ರೆಜಿ ಅಧ್ಯಕ್ಷತೆಯಲ್ಲಿ ನಡೆಯಿತು.
ಆರ್ಜಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ರಾಜನ್ ಆರ್ ಅವರು ಮಕ್ಕಳ ಮೇಲಾಗುವ ದೌರ್ಜನ್ಯಗಳು, ಎದುರಿಸುವ ಸಮಸ್ಯೆಗಳಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇತ್ಯರ್ಥವಾಗಲೆಂದು ಸರ್ಕಾರವು ಮಕ್ಕಳ ಹಕ್ಕುಗಳನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳ ಗ್ರಾಮ ಸಭೆಯನ್ನು ಅನುಷ್ಠಾನಗೊಳಿಸಿದೆ. ಗ್ರಾಮ ವ್ಯಾಪ್ತಿಯಲ್ಲಿರುವ ಮಕ್ಕಳ ಸಮಸ್ಯೆಗಳನ್ನು ನೇರವಾಗಿ ಸಭೆಯಲ್ಲಿ ತಿಳಿಸಬಹುದಾಗಿದೆ ಎಂದು ಹೇಳಿದರು.
ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಬಾಣೆ ಗ್ರಾಮದಿಂದ ನಗರಕ್ಕೆ ತೆರಳಲು ಸುಮಾರು ಮೂರು ಕಿ.ಮೀಗಳಾಗುತ್ತದೆ. ಆರೋಗ್ಯ ಸಮಸ್ಯೆ ಎದುರಾದಲ್ಲಿ ಸ್ಥಳೀಯವಾಗಿ ಬಗೆಹರಿಸಲು ಅರೋಗ್ಯ ಕೇಂದ್ರದ ಅವಶ್ಯಕತೆದ್ದು, ಎಂದು ನಸ್ರುತುಲ್ ಉಲಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಭೆಯಲ್ಲಿ ಬೇಡಿಕೆಯಿಟ್ಟದ್ದು, ಅದರಂತೆ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆಯಿದೆ ಶಾಲೆ ಬಿಡುವ ವೇಳೆಯಲ್ಲಿ ವಿಧ್ಯಾರ್ಥಿಗಳಿಗೆ ರಸ್ತೆ ದಾಟಲು ಭಯವಾಗುತ್ತದೆ ಆದುದರಿಂದ ನಾಮ ಫಲಕ ಮತ್ತು ರಸ್ತೆ ಹುಬ್ಬು ಹಾಕುವಂತೆ ಮನವಿ ಮಾಡಿದರು.
ಆರ್ಜಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಿಗೆ ನಾಮ ಫಲಕ ಅಳವಡಿಸಲು ಕ್ರಮ ಜರುಗಿಸಲಾಗುತ್ತದೆ ಎಂದು ಪಂಚಾಯಿತಿ ಅದ್ಯಕ್ಷರು ಹೇಳಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆರ್ಜಿಯಲ್ಲಿ ಶಾಲೆಯ ಅವಧಿಯ ನಂತರ ಸಂಜೆ ೫ ರಿಂದ ಶಾಲಾ ಅವರಣದಲ್ಲಿ ಕೆಲವು ಕಿಡಿಗೇಡಿಗಳು ಧೂಮಪಾನ ಮಧ್ಯಪಾನ ಮಾಡಿ ನಿರುಪಯುಕ್ತ ವಸ್ತುಗಳನ್ನು ಹಾಕಿ ತೆರಳುತ್ತಿದ್ದಾರೆ. ಪೊಲೀಸ್ ಇಲಾಖೆ ಕಣ್ಗಾವಲು ಮಾಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಇಲಾಖೆಯು ಬೀಟ್ ಸಿಬ್ಬಂದಿಗಳ ಮೂಲಕ ಕಿಡಿಗೇಡಿಗಳ ವಿರುದ್ದ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು. ಪೆರುಂಬಾಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಂಭಾಗದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಿಂದ ಬರುವ ನೊಣಗಳ ಉಪಟಳವಿದ್ದು ಇದು ದಿನನಿತ್ಯ ಸೇವನೆ ಮಾಡುವ ಆಹಾರ ಪದಾರ್ಥಗಳ ಮೇಲೆ ಧಾಳಿ ಮಾಡುತ್ತದೆ. ಇದರಿಂದ ಆಹಾರ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ತರಾಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ಕಸ ವಿಲೇವಾರಿ ಘಟಕವನ್ನು ಇತರೆಡೆಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಪುರಸಭೆಗೆ ಪತ್ರ ಬರೆಯಲಾಗುತ್ತದೆ ಮತ್ತು ವಸತಿ ಶಾಲೆಯ ಉನ್ನತ ಮಟ್ಟದ ಅಧಿಕಾರಿಗಳಿಂದ ಪತ್ರಕ್ಕೆ ಮುಂದಾಗಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಗ್ರಾಮದ ಮಕ್ಕಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಒಟ್ಟು ೧೫ ಅರ್ಜಿಗಳು ಸಲ್ಲಿಕೆಯಾದವು.
ನಗರ ಠಾಣೆಯ ಸಹಾಯಕ ಠಾಣಾಧಿಕಾರಿಗಳಾದ ಎಂ.ಎA. ಮೊಹಮ್ಮದ್ ಮಾತನಾಡಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದೆ. ಅನಾವಶ್ಯಕ ಸಂದೇಶಗಳಿಗೆ ಉತ್ತರಿಸದಿರುವುದು ಸೂಕ್ತ, ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡುವುದು ಅಪರಾಧವಾಗಿದೆ. ಅಪ್ರಾಪ್ತರು ಎಂದಿಗೂ ವಾಹನ ಚಾಲನೆಗೆ ಮುಂದಾಗದಿರಿ. ಇದರಿಂದ ಬೃಹತ್ ಮೊತ್ತದ ದಂಡಕ್ಕೆ ಪೋಷಕರು ಬಲಿಯಾಗಬೇಕಿದೆ. ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಫಾತಿಮಾ ರೆಜಿ ಅವರು ಮಕ್ಕಳ ಹಕ್ಕುಗಳನ್ನು ಪರಿಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಮಕ್ಕಳು ನೀಡಿರುವ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತದೆ ಮತ್ತು ಪರಿಹಾರಕ್ಕೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪ್ರಮೋದ್ ಪಿ.ಕೆ. ಸದಸ್ಯರಾದ ಕೆ.ಎನ್. ಉಪೇಂದ್ರ, ಕೆ.ಟಿ. ಭಶೀರ್, ಕೆ.ಕೆ. ಬೋಪಣ್ಣ, ಶಹಜೀರ್ ಆಲಿ ಕೆ.ಬಿ ಉಪಸ್ಥಿತರಿದ್ದರು. ಪಂಚಾಯಿತಿ ಕಾರ್ಯದರ್ಶಿ ರಾಜನ್ ಆರ್ ಸ್ವಾಗತಿಸಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪ್ರಮೋದ್ ಪಿ.ಕೆ. ಸರ್ವರನ್ನು ವಂದಿಸಿದರು.
ಮಕ್ಕಳ ಗ್ರಾಮ ಸಭೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆರ್ಜಿ, ಅನ್ವರುಲ್ ಹುದಾ ಆಂಗ್ಲ ಮಾಧ್ಯಮ ಶಾಲೆ ಆರ್ಜಿ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪೆರುಂಬಾಡಿ, ಬದ್ರೀಯ ಪಬ್ಲಿಕ್ ಶಾಲೆ ಕಲ್ಲುಬಾಣೆ, ಶಂಸುಲ್ ಉಲುಮಾ ಆಂಗ್ಲ ಮಾಧ್ಯಮ ಶಾಲೆ ಪೆರುಂಬಾಡಿ ಗ್ರಾಮ ಶಾಲೆಯ ವಿಧ್ಯಾರ್ಥಿಗಳು ಸೇರಿದಂತೆ ಶಿಕ್ಷಕರು, ಆರ್ಜಿ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಹಾಜರಿದ್ದರು.