ಕಣಿವೆ, ಜ. ೯ : ಕುಶಾಲನಗರದ ಬ್ಲಾಕ್ ಕಾಂಗ್ರೆಸ್ ಪ್ರಾಂಗಣದಲ್ಲಿ ತಾಲೂಕು ಅಲ್ಪಸಂಖ್ಯಾತರ ಸಭೆ ಸಮಿತಿಯ ತಾಲೂಕು ಅಧ್ಯಕ್ಷ ಅಬ್ದುಲ್ ರಜಾಕ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಮಂದಿ ಅಲ್ಪಸಂಖ್ಯಾತ ಕಾರ್ಯಕರ್ತರು ಪಕ್ಷ ಅಧಿಕಾರಕ್ಕೆ ಬಂದ ಬಳಿಕ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಅಲ್ಪಸಂಖ್ಯಾತ ವರ್ಗದಲ್ಲಿ ಸಾಕಷ್ಟು ಮಂದಿ ವಿದ್ಯಾವಂತ ಪದವೀಧರರು ಇದ್ದರೂ ಕೂಡ ಅವರಿಗೆ ಉದ್ಯೋಗ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಚುನಾಯಿಸಿರುವ ಅಲ್ಪಸಂಖ್ಯಾತ ವಿದ್ಯಾವಂತ ಯುವಕ - ಯುವತಿಯರಿಗೆ ಬೇರೆ ಬೇರೆ ಇಲಾಖೆಗಳಲ್ಲಿ ಆಯಕಟ್ಟಿನ ಹುದ್ದೆಗಳನ್ನು ದೊರಕಿಸಿಕೊಡಲು ಸಮುದಾಯದ ಪ್ರಮುಖರು ಮುಂದಾಗಬೇಕೆAದು ಸುಂಟಿಕೊಪ್ಪ ಗ್ರಾಪಂ ಸದಸ್ಯ ರಫೀಕ್ ಹೇಳಿದರು.

ಅಲ್ಪಸಂಖ್ಯಾತರು ಯಾವತ್ತೂ ಒಂದೇ ಪಕ್ಷ. ಹಾಗಾಗಿ ನಮಗೆ ಹೆಚ್ಚಿನ ಅನುದಾನ ಕೊಡಬೇಕು ಎಂದು ಸುಂಟಿಕೊಪ್ಪದ ಇಸಾಖ್ ಖಾನ್ ಹೇಳಿದರು. ಅತ್ಯಂತ ಹೆಚ್ಚಿನ ಜನಸಂಖ್ಯೆ ಹಾಗೂ ಅಧಿಕ ಮತದಾರರನ್ನು ಹೊಂದಿರುವ ಕುಶಾಲನಗರ ತಾಲೂಕಿಗೆ ಹೆಚ್ಚಿನ ಅನುದಾನವನ್ನು ಕೊಡುವ ಮೂಲಕ ತಾಲೂಕಿನಲ್ಲಿರುವ ಅಲ್ಪಸಂಖ್ಯಾತರ ಸರ್ವಾಂಗೀಣ ಅಭಿವೃದ್ದಿಗೆ ಸಹಕರಿಸಬೇಕೆಂದು ಅಬ್ದುಲ್ ರಜಾಕ್ ಒತ್ತಾಯಿಸಿದರು.

ಕೆದಕಲ್ ಜೇಮ್ಸ್ ಡಿಸೋಜಾ ಮಾತನಾಡಿ, ಭೂತ್ ಸಮಿತಿಗಳಲ್ಲಿ ಅಪಾರ ವರ್ಷಗಳಿಂದ ಇದ್ದವರೇ ಇದ್ದಾರೆ. ಹಳಬರನ್ನು ಬದಲಿಸಿ ಯುವಕರಿಗೆ ಅವಕಾಶ ಕಲ್ಪಿಸಿ ಎಂದರು. ಮುಳ್ಳುಸೋಗೆ ಅಶ್ರಫ್ ಮಾತನಾಡಿ, ಸರ್ಕಾರದ ವಿವಿಧ ಸಮಿತಿಗಳಿಗೆ ನಾಮನಿರ್ದೇಶನ ಮಾಡುವಾಗ ಕಟ್ಟಾ ಕಾಂಗ್ರೆಸ್ಸಿಗರ ಕಡೆಗಣನೆಯಾಗುತ್ತಿದೆ ಇದು ತಪ್ಪಿಸಿ ಎಂದರು.

ಚೆಟ್ಟಳ್ಳಿ ರಫೀಕ್ ಮಾತನಾಡಿ, ಅಲ್ಪಸಂಖ್ಯಾತರ ಅನುದಾನವಾಗಲೀ, ವಾಸದ ಮನೆಗಳಾಗಲೀ ನಮ್ಮ ಊರಿಗೆ ಏನೇನೂ ಆಗಿಲ್ಲ. ಮುಂದಿನ

ದಿನಗಳಲ್ಲಿ ಹೆಚ್ಚಿನ ಆದ್ಯತೆ ಕಲ್ಪಿಸಲು ಕೋರಿದರು. ಕಾರ್ಯಕರ್ತರ ಅಹವಾಲುಗಳನ್ನು ಆಲಿಸಿದ ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಅಲ್ಪಸಂಖ್ಯಾತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದಿಂದ ೧೦ ಕೋಟಿ ರೂಗಳ ಅನುದಾನ ತರಲಾಗಿದೆ. ಈ ಪೈಕಿ ಈಗಾಗಲೇ ೩.೫೦ ಕೋಟಿ ರೂಗಳು ಬಿಡುಗಡೆಗೊಂಡಿದೆ. ಉಳಿದ ೬.೫೦ ಕೋಟಿ ರೂಗಳ ಅನುದಾನ ಬಿಡುಗಡೆಗೆ ಪ್ರಯತ್ನ ನಡೆಸಲಾಗಿದೆ.

ಈಗಾಗಲೇ ಕ್ಷೇತ್ರದಲ್ಲಿ ಅಪೂರ್ಣಗೊಂಡಿರುವ ಶಾದಿ ಮಹಲ್‌ಗಳಿಗೆ ವಿಶೇಷ ಅನುದಾನಕ್ಕಾಗಿ ಒತ್ತಾಯಿಸಲಾಗಿದೆ. ಸರ್ಕಾರದ ವಿವಿಧ ಸಮಿತಿಗಳಿಗೆ ಬಹುತೇಕ ಅಲ್ಪಸಂಖ್ಯಾತ ಕಾರ್ಯಕರ್ತರನ್ನು ನೇಮಿಸಲಾಗಿದೆ. ಮೊದಲ ಹಂತದಲ್ಲಿ ಅವಕಾಶ ವಂಚಿತರಾದವರಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡಲಾಗುತ್ತದೆ ಎಂದರು.

ಕಾAಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತಂದಿರುವ ಯಾವುದೇ ಸಮುದಾಯವನ್ನು ಕಡೆಗಣಿಸಿಲ್ಲ. ಶಕ್ತಿ ಮೀರಿ ಸರ್ಕಾರದ ಸಚಿವಾಲಯಗಳಿಗೆ ಎಡತಾಕಿ ಅನೇಕ ಯೋಜನೆಗಳಿಗೆ ಅನುದಾನ ತರಲಾಗುತ್ತಿದೆ. ಇನ್ನಷ್ಟೂ ಅನುದಾನ ತರಲು ಶ್ರಮಿಸುತ್ತೇನೆ ಎಂದು ಶಾಸಕರು ಈ ಸಂದರ್ಭ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಅಲ್ಪಸಂಖ್ಯಾತ ಘಟಕದ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಹನೀಫ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಟಿ.ಪಿ.ಹಮೀದ್, ಕೆಪಿಸಿಸಿ ಸದಸ್ಯರಾದ ಮಂಜುನಾಥ ಗುಂಡೂರಾವ್, ಜೋಸೆಫ್, ಸುನೀತಾ ಮಂಜುನಾಥ್, ಕೆ.ಎ.ಯಾಕುಬ್, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳಾದ ಫಿಲೋಮಿನಾ, ಜೋಸೆಫ್ ವಿಕ್ಟರ್ ಸೋನ್ಸ್, ಕೆ.ಎಂ.ಬಾವಾ, ಹಕೀಂ, ಕುಶಾಲನಗರ ಕೂಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮೊದಲಾದವರಿದ್ದರು.

-ವರದಿ : ಕೆ.ಎಸ್.ಮೂರ್ತಿ