ಇಪ್ಪತ್ತೆರಡರ ಹರೆಯದ ರಂಗಪ್ಪನಿಗೆ ಉತ್ತಮವಾದ ವಿದ್ಯಾಭ್ಯಾಸವನ್ನು ಕೊಡಿಸಲು ಅವರಪ್ಪ ಸಂಕಪ್ಪನವರು ಮಗನನ್ನು ಮುಂಬೈಯ ಪ್ರತಿಷ್ಠಿತ ಕಾಲೇಜಿನಲ್ಲಿ ಸೇರಿಸಿದರು. ಒಬ್ಬನೇ ಮಗನೆಂದು ಅವನಿಗೆ ಪ್ರತಿ ತಿಂಗಳೂ ಸಾಕಷ್ಟು ಹಣವನ್ನು ಕಳುಹಿಸುತ್ತಿದ್ದುದರಿಂದ ಅವನ ಗೆಳೆಯರ ಬಳಗವು ಹೆಚ್ಚಾಗತೊಡಗಿತು. ಇದರೊಂದಿಗೆ ಮದ್ಯಪಾನದ ಚಟವೂ ಶುರುವಾಗಿ ಅನಂತರ ಹರೆಯದ ತುಡಿತಗಳನ್ನು ತಾಳಲಾಗದೆ ಮುಂಬೈನ ಪ್ರಸಿದ್ಧ ಕೆಂಪುದೀಪದ ಗಲ್ಲಿಗಳಲ್ಲಿ ಸಂಜೆಯ ವೇಳೆ ಹೋಗಿಬರುವ ಚಟವನ್ನೂ ಅಂಟಿಸಿಕೊAಡನು. ಇದಾದ ಒಂದು ತಿಂಗಳ ನಂತರ ಅವನಿಗೆ ತಗುಲಿದ ಜ್ವರವು ಗುಣವಾಗದೆ ಸ್ವಲ್ಪ ದಿವಸ ರಜೆಯಲ್ಲಿ ಮನೆಗೆ ಹೋದರೆ ಎಲ್ಲವೂ ಸರಿಯಾಗುವುದು ಎಂದು ಭಾವಿಸಿ ರಂಗಪ್ಪನು ತನ್ನ ಹಳ್ಳಿಗೆ ಹಿಂದಿರುಗಿದನು. ಮಗನು ಬಹಳ ಖಿನ್ನತೆಯಿಂದ ಕೂಡಿರುವುದನ್ನು ಗಮನಿಸಿ ಅವನಿಗೆ ಚಿಕಿತ್ಸೆಗೆಂದು ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಅವನ ರಕ್ತಪರೀಕ್ಷೆ ಮಾಡಿಸಿದಾಗ ಅವನಿಗೆ ಏಡ್ಸ್ ವ್ಯಾದಿ ತಗುಲಿರುವುದು ಖಚಿತವಾಯಿತು. ಇಂತಹ ರಂಗಪ್ಪಗಳು ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಇದೀಗ ಹಳ್ಳಿಗಳಲ್ಲೂ ಧಾರಾಳವಾಗಿ ಕಾಣಲು ಸಿಗುತ್ತಿದ್ದಾರೆ. ಹರೆಯದ ತೆವಲನ್ನು ತೀರಿಸಿಕೊಳ್ಳಲು ನಿತ್ಯ ಸುಮಂಗಲಿಯರ ಸಂಪರ್ಕ ಮಾಡುತ್ತಿರುವವರ ಸಂಖ್ಯೆಯು ದ್ವಿಗುಣಗೊಳ್ಳುತ್ತಿದೆ. ಇಂದು ಡಿಸೆಂಬರ್ ಒಂದರAದು ವಿಶ್ವ ಏಡ್ಸ್ ದಿನದಂದು ಈ ವಿಷಯದ ಬಗ್ಗೆ ಜನಜಾಗೃತಿ ಮೂಡಿಸುವುದು ಸೂಕ್ತವೆನ್ನಿಸುತ್ತದೆ.
ಏಡ್ಸ್ ಎನ್ನುವ ಗುಣಪಡಿಸಲಾಗದ ರೋಗ ಮೊದಲಿಗೆ ೧೯೮೦ ರಲ್ಲಿ ಆಫ್ರಿಕಾದ ಮಂಗಗಳಿAದ ಆರಂಭವಾಯಿತು ಎಂದು ದಾಖಲೆಗಳು ಹೇಳುತ್ತಿವೆ. ಆದರೂ ದಾಖಲೆಗಳ ಪ್ರಕಾರ ೧೯೫೯ ರಲ್ಲಿ ಕಾಂಗೋ ಪ್ರಾಂತ್ಯದ ಕಿನ್ಶಾಷ ಎಂಬಲ್ಲಿ ಒಬ್ಬ ವ್ಯಕ್ತಿ ಮೃತನಾದ ಸಮಯದಲ್ಲಿ ಅವನ ರಕ್ತ ಪರೀಕ್ಷಿಸಿದಾಗ ಏಡ್ಸ್ ರೋಗಾಣುಗಳು ಅವನಲ್ಲಿತ್ತು ಎಂಬುದು ದೃಢಪಟ್ಟಿದೆ. ಅನಂತರ ಮಾಂಸಕ್ಕಾಗಿ ಚಿಂಪಾAಜಿಯನ್ನು ಬೇಟೆಯಾಡಿ ಅದರ ಮಾಂಸವನ್ನು ತಿಂದಾಗ ಅದರ ಮಾಂಸದ ಮೂಲಕ ಆಧುನಿಕ ಜಗತ್ತಿಗೆ ಏಡ್ಸ್ ಕಾಲಿರಿಸಿತು ಎಂದೂ ಹೇಳಲಾಗುತ್ತಿದೆ. ಭಾರತದಲ್ಲಿ ೧೯೮೬ರಲ್ಲಿ ಚೆನ್ನೆöÊನ ಗಲ್ಲಿಯೊಂದರ ಮಹಿಳೆಯಲ್ಲಿ ಈ ವ್ಯಾಧಿ ಆರಂಭಗೊAಡು ಅನಂತರ ಇತರರಿಗೆ ಪ್ರಸರಣಗೊಂಡಿತು ಎಂದು ಭಾವಿಸಲಾಗಿದೆ. ನಂತರದ ದಿನಗಳಲ್ಲಿ ಇದು ಭಾರತದ ಉದ್ದಗಲಗಳಲ್ಲೂ ಹರಡಿತಾದರೂ ಇಂದು ಪೂರ್ವ ಭಾರತದ ಮಿಜೋರಾಮ್ ತಾಣವು ಈ ಗುಣಪಡಿಸಲಾಗದ ಮಾರಕ ರೋಗದ ಕೇಂದ್ರ ಎನ್ನುವ ಕುಖ್ಯಾತಿ ಪಡೆದಿದೆ.
ಹೆಚ್.ಐ.ವಿ. (ಹ್ಯೂಮನ್ ಇಮ್ಯುನೋ ಡೆಫಿಸಿಯೆನ್ಸಿ ವೈರಸ್) ಎನ್ನುವ ವೈರಸ್ ದೇಹದ ಮೇಲೆ ದಾಳಿ ಮಾಡಿ ದೇಹದ ನಿರೋಧಕ ಶಕ್ತಿ ದುರ್ಬಲಗೊಳಿಸುತ್ತದೆ. ಏಡ್ಸ್ (ಎಕ್ವರ್ಡ್ ಇಮ್ಯುನೋ ಡೆಫಿಸಿಯೆನ್ಸಿ) ಎನ್ನುವುದು ದೇಹದ ನಿರೋಧಕ ಶಕ್ತಿಯು ಸಂಪೂರ್ಣ ಕುಸಿದಾಗ ಆಗುವ ಸ್ಥಿತಿಯಾಗಿದೆ. ಹೆಚ್.ಐ.ವಿ.ಯು ದೇಹದ ಟಿ ಸೆಲ್ಗಳನ್ನು ದುರ್ಬಲಗೊಳಿಸಿ ಸಣ್ಣಪುಟ್ಟ ಅಸೌಖ್ಯವನ್ನೂ ಗುಣಪಡಿಸಲಾಗದ ಸ್ಥಿತಿಗೆ ತಂದುಬಿಡುತ್ತದೆ. ಹಾಗಾಗಿ ಹೆಚ್.ಐ.ವಿ. ಇದ್ದರೂ ಸೂಕ್ತ ಚಿಕಿತ್ಸೆ ಪಡೆಯುತ್ತಲೇ ಇದ್ದಾಗ ಅದು ಏಡ್ಸ್ಗೆ ತಿರುಗದೆ ಆ ವ್ಯಕ್ತಿ ದೀರ್ಘಕಾಲದವರೆಗೂ ಬದುಕುವ ಸಾಧ್ಯತೆಗಳು ಇರುತ್ತವೆ. ಕೆಲವೊಮ್ಮೆ ಹೆಚ್.ಐ.ವಿ. ಸೋಂಕು ತಗುಲಿದ ವ್ಯಕ್ತಿ ಸಣ್ಣ ಜ್ವರದಿಂದ ಬಳಲಿ ನಂತರ ಅದು ಗುಣವಾದಂತೆ ಕಂಡುಬರುತ್ತಾನೆ. ಆದರೆ ಈ ವೈರಸ್ ದೇಹದೊಳಗೇ ಹುದುಗಿದ್ದು ಯಾವುದೇ ಬಾಹ್ಯವಾದ ಸಮಸ್ಯೆಗಳನ್ನು ತೋರುವುದಿಲ್ಲ. ಈ ಸಮಯದಲ್ಲಿ ಇದು ನಿಧಾನವಾಗಿ ದೇಹದ ಟಿ ಸೆಲ್ಗಳನ್ನು ನಾಶಪಡಿಸುತ್ತ ಕೊನೆಗೆ ತೀವ್ರವಾಗಿ ಉಲ್ಬಣಗೊಂಡು ಏಡ್ಸ್ ರೋಗಕ್ಕೆ ತಿರುಗಿ ವ್ಯಕ್ತಿಯನ್ನು ಬಲಿತೆಗೆದುಕೊಳ್ಳುತ್ತದೆ. ಅದಕ್ಕೂ ಮುನ್ನ ವ್ಯಕ್ತಿಯಲ್ಲಿ ತೀವ್ರ ಪ್ರಮಾಣದ ತೂಕದ ಇಳಿಕೆ, ಅತಿಯಾದ ಸುಸ್ತು, ಗುಣವಾಗದ ಜ್ವರ, ರಾತ್ರಿಯಲ್ಲಿ ಬೆವರುವುದು, ಚರ್ಮದ ಬಣ್ಣದಲ್ಲಿ ಬದಲಾವಣೆ ಹೀಗಾಗಿ ಇದು ಕೊನೆಗೆ ಕ್ಯಾನ್ಸರ್ಗೂ ಕಾರಣವಾಗಬಹುದು.
ಹೆಚ್.ಐ.ವಿ. ಎನ್ನುವ ವೈರಸ್ ದೇಹದೊಳಗೆ ಪ್ರವೇಶಿಸಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದುದೆಂದರೆ ಸುರಕ್ಷಿತವಲ್ಲದ ಲೈಂಗಿಕ ಸಂಪರ್ಕ. ಯಾವುದೇ ಕಾರಣಕ್ಕೂ ಅಪರಿಚಿತರೊಂದಿಗೆ ಲೈಂಗಿಕ ಸಂಪರ್ಕವನ್ನು ಮಾಡುವುದು ಸರಿಯಲ್ಲ. ಆದರೂ ಅಂತಹ ಸಂದರ್ಭಗಳು ಅನಿವಾರ್ಯವಾದಾಗ ಕಾಂಡೋಮ್ಗಳನ್ನು ಬಳಸುವುದು ಸೂಕ್ತವಾಗುತ್ತದೆ. ಆದರೂ ಇಲ್ಲೂ ಸಹ ಸ್ವಾಭಾವಿಕವಲ್ಲದ ಲೈಂಗಿಕ ಕ್ರಿಯೆಗಳು ಎಂದಿಗೂ ಸಲ್ಲದು. ಎರಡನೆಯದಾಗಿ ಮಾದಕ ವಸ್ತುಗಳನ್ನು ಇಂಜೆಕ್ಷನ್ ಮೂಲಕ ತೆಗೆದುಕೊಳ್ಳುವವರು ಬಳಸುವ ಒಂದೇ ಸೂಜಿಯೂ ಈ ರೋಗವು ಪಸರಿಸಲು ಕಾರಣವಾಗಿದೆ. ಆದುದರಿಂದ ಈಗ ಯಾವುದೇ ವ್ಯಾಧಿಗೂ ಚುಚ್ಚುಮದ್ದನ್ನು ತೆಗೆದುಕೊಳ್ಳುವಾಗ ಪ್ರತಿಬಾರಿಯೂ ಹೊಸ ಸೂಜಿಯನ್ನೇ ಬಳಸುವುದು ಸೂಕ್ತವೆನ್ನಿಸುತ್ತದೆ. ಮೂರನೆಯದಾಗಿ ಸೌಂದರ್ಯ ವರ್ಧನೆಗೆಂದು ಹಚ್ಚೆ ಹಾಕಿಸಿಕೊಳ್ಳುವವರು ಬಳಸುವ ಸಾರ್ವತ್ರಿಕ ಸೂಜಿಯು ಏಡ್ಸ್ ಅನ್ನು ಹರಡುತ್ತದೆ. ಹೆಚ್.ಐ.ವಿ. ಇರುವವರು ಹಚ್ಚೆ ಹಾಕಿಸಿಕೊಳ್ಳಲು ಬಳಸುವ ಸೂಜಿಯನ್ನೇ ಇತರರು ಹಚ್ಚೆ ಹಾಕಿಸಿಕೊಳ್ಳಲು ಬಳಸಿದರೆ ಆಗ ಏಡ್ಸ್ ತಗುಲುವ ಸಾಧ್ಯತೆಗಳು ಹೆಚ್ಚಾಗುತ್ತವೆ. ನಾಲ್ಕನೆಯದಾಗಿ ಕ್ಷೌರಿಕನಲ್ಲಿ ಗಡ್ಡ ಬೋಳಿಸಿಕೊಳ್ಳಲು ಹೋದಾಗ ಅವನು ಒಂದೇ ಬ್ಲೇಡನ್ನು ಎಲ್ಲರಿಗೂ ಬಳಸುವುದು. ಪ್ರತಿಬಾರಿಯೂ ಗಡ್ಡ ತೆಗೆಸುವಾಗ ಹೊಸತಾದ ಬ್ಲೇಡನ್ನೇ ಬಳಸಬೇಕಲ್ಲದೆ ಬಳಸಲ್ಪಟ್ಟ ಬ್ಲೇಡನ್ನು ಮತ್ತೆ ಬಳಸಲೇಬಾರದು. ಐದನೆಯದಾಗಿ ಸಾಮೂಹಿಕ ಮೋಜಿನ ಕೂಟಗಳಲ್ಲಿ ಒಬ್ಬರು ಸೇದಿದ ಸಿಗರೇಟು/ಬೀಡಿ ಮೊದಲಾದುವನ್ನು ಒಂದು “ದಮ್” ಎಳೆದು ಪಾರ್ಟಿಯಲ್ಲಿ ನಾವೆಲ್ಲರೂ ಸಮಾನರು ಎಂಬ ಧೋರಣೆಯನ್ನು ಮೂಡಿಸುವುದು. ಕೊನೆಯದಾಗಿ ಆಕಸ್ಮಿಕಗಳಿಂದ ರಕ್ತದ ಕೊರತೆಯುಂಟಾಗಿ ಅದನ್ನು ಸರಿದೂಗಿಸಲು ರಕ್ತ ನಿಧಿ ಕೇಂದ್ರದಿAದ ರಕ್ತವನ್ನು ಪಡೆಯುವುದು. ಕೇವಲ ಪರಿಚಿತ ವ್ಯಕ್ತಿಯ ರಕ್ತವನ್ನು ಮಾತ್ರ ಪಡೆಯಬೇಕಲ್ಲದೆ ಹಣಕ್ಕಾಗಿ ರಕ್ತವನ್ನು ಮಾರುವ ಉದ್ಯೋಗ ಮಾಡಿಕೊಂಡಿರುವವರಿAದ ರಕ್ತ ಪಡೆಯಲೇಬಾರದು.
ಇತ್ತೀಚಿನ ವರದಿಗಳು ಬಂದAತೆ ಏಡ್ಸ್ ತನ್ನ ಸಾಮರ್ಥ್ಯವನ್ನು ಕಡಿಮೆಗೊಳಿಸಿಕೊಳ್ಳುತ್ತಿದೆ ಹಾಗೂ ಏಡ್ಸ್ನಿಂದ ಬಾಧಿತರಾದವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಅದೇನೇ ಇದ್ದರೂ ಶಾಲಾ-ಕಾಲೇಜುಗಳಲ್ಲಿ ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಿದಾಗ ಮಾತ್ರ ನಮ್ಮ ದೇಶದ ಮುಂದಿನ ಪ್ರಜೆಗಳನ್ನು ನಾವು ಉಳಿಸಿಕೊಳ್ಳಬಹುದು.
- ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು. ಮೊ. ೯೧೪೧೩ ೯೫೪೨೬.