ವೀರಾಜಪೇಟೆ, ನ. ೩೦: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಕಚೆೆÃರಿ ಹಾಗೂ ಅಂಚೆ ಕಚೇರಿಯೊಳಗೆ ನುಗ್ಗಿ ಕಳ್ಳರು ಕನ್ನ ಹಾಕಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ವೀರಾಜಪೇಟೆ ಗೋಣಿಕೊಪ್ಪ ಮುಖ್ಯರಸ್ತೆಯಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಅಂಚೆ ಕಚೇರಿಯ ಬೀಗ ಒಡೆದು ಕಳ್ಳರು ಈ ಕೃತ್ಯ ಎಸಗಿದ್ದಾರೆ.

ಖದೀಮರ ತಂಡ ರಾತ್ರಿ ವೇಳೆಯಲ್ಲಿ ತನ್ನ ಕೈಚಳಕದಿಂದ ಕಚೇರಿ ಪಕ್ಕದಲ್ಲಿ ಅಳವಡಿಸಲಾಗಿದ್ದ ಸಿ.ಸಿ. ಕ್ಯಾಮರಾವನ್ನು ಬೇರೆಡೆಗೆ ತಿರುಗಿಸಿ ತದನಂತರ ಬೀದಿ ದೀಪವನ್ನು ಹಾಳು ಮಾಡಿ ಕಚೇರಿಯ ಮುಖ್ಯ ಬಾಗಿಲಿನ ಬೀಗ ಮುರಿದು ನಂತರ ಒಳಗಿನ ಎರಡು ಬಾಗಿಲುಗಳ ಬೀಗ ಮುರಿದು ಒಳನುಗ್ಗಿ ಕಂಪ್ಯೂಟರ್ ಮದರ್ ಬೋರ್ಡ್, ಡಿವಿಆರ್ ಮುಂತಾದವುಗಳನ್ನು ಹಾಗೂ ಅಂಚೆ ಕಚೇರಿಯಿಂದ ರೂ. ಸಾವಿರ ನಗದು ಕದ್ದೊಯ್ದಿದ್ದಾರೆ.

ಕಚೇರಿಯಲ್ಲಿರುವ ನಗದು, ದಾಖಲೆ ಪತ್ರಗಳನ್ನು ಕಳ್ಳತನ ಮಾಡುವ ಉದ್ದೇಶ ಇದ್ದಿರಬಹುದು ಎಂದು ಅನುಮಾನಿಸಲಾಗಿದೆ.

ಅಂಚೆ ಕಚೇರಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ಬೆಳಿಗ್ಗೆ ಕರ್ತವ್ಯಕ್ಕೆಂದು ಬಂದ ವೇಳೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸಿಬ್ಬಂದಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೂಕಚಂಡ ಪ್ರಸನ್ನ ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದು ವೀರಾಜಪೇಟೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಕೇಂದ್ರದಿAದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಸಿ ಪರಿಶೀಲನೆ ನಡೆಸಿದರೂ ಯಾವುದೇ ಸುಳಿವು ದೊರೆತಿಲ್ಲ. ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಕೋಟುಪರಂಬು ಗ್ರಾಮದ ಬ್ಯಾಂಕ್ ಆಫ್ ಬರೋಡದಲ್ಲಿ ಇತ್ತೀಚೆಗೆ ಕಳ್ಳತನಕ್ಕೆ ಯತ್ನವಾಗಿತ್ತು. ಇದೀಗ ಬಿಟ್ಟಂಗಾಲ ಪಂಚಾಯಿತಿಯಲ್ಲಿ ಕಳ್ಳತನವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.