ಮಡಿಕೇರಿ, ಅ. ೩೦: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಪತ್ರಕರ್ತರ ಕಾಲ್ಚೆಂಡು ಪಂದ್ಯಾವಳಿಯು ನವೆಂಬರ್ ೩ ರಂದು ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕ್ರೀಡಾಕೂಟದ ಸಂಚಾಲಕ ಪ್ರೆಸ್‌ಕ್ಲಬ್ ನಿರ್ದೇಶಕರಾಗಿರುವ ಇಸ್ಮಾಯಿಲ್ ಕಂಡಕರೆ ಹಾಗೂ ವಿನೋದ್ ಕೆ.ಎಂ. ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು ಪ್ರೆಸ್‌ಕ್ಲಬ್ ಫುಟ್ಬಾಲ್ ಪಂದ್ಯಾವಳಿಯು ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಸೂಪರ್ ಸೆವೆನ್ಸ್ ಮಾದರಿಯ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳು ಭಾಗವಹಿಸಲಿದೆ. ಗೋಪಾಲ್ ಸೋಮಯ್ಯ ನಾಯಕತ್ವದ ಮೀಡಿಯಾ ಯುನೈಟೆಡ್, ಸುರ್ಜಿತ್ ನಾಯಕತ್ವದ ರಾಕ್‌ಸ್ಟಾರ್, ವಿಜಯ್ ರಾಯ್ ನಾಯಕತ್ವದ ಟೀಮ್ ಫೀನಿಕ್ಸ್ ಹಂಟರ್, ಇಸ್ಮಾಯಿಲ್ ಕಂಡಕರೆ ನಾಯಕತ್ವದ ಮಾಸ್ಟರ್ ಎಫ್.ಸಿ ತಂಡಗಳು ಭಾಗವಹಿಸಲಿವೆ. ಕೊಡಗು ಪ್ರೆಸ್‌ಕ್ಲಬ್ ಫುಟ್ಬಾಲ್ ಪಂದ್ಯಾವಳಿಯ ಚಾಂಪಿಯನ್ ತಂಡಕ್ಕೆ ಕೆನೇಡಿಯನ್ ಮಾದರಿಯ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಅದಲ್ಲದೇ ಚಾಂಪಿಯನ್ ತಂಡದ ನಾಯಕನಿಗೆ ವೈಯಕ್ತಿಕವಾಗಿ ೧,೫೦೦ ರೂ. ನಗದು ಬಹುಮಾನ ಮತ್ತು ಎಲ್ಲಾ ಆಟಗಾರರಿಗೆ ತಲಾ ಸಾವಿರ ರೂ ನೀಡಲಾಗುವುದು. ರನ್ನರ್ಸ್ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ತಂಡದ ನಾಯಕನಿಗೆ ವೈಯಕ್ತಿಕ ೧,೦೦೦ ರೂ. ಹಾಗೂ ತಂಡದ ಎಲ್ಲಾ ಆಟಗಾರರಿಗೆ ತಲಾ ೫೦೦ ರೂ ಬಹುಮಾನ ನೀಡಲಾಗುವುದು. ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೂ ಟ್ರೋಫಿ ನೀಡಲಾಗುತ್ತದೆ. ಅದಲ್ಲದೇ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ಆಟಗಾರರಿಗೆ ಟ್ರೋಫಿ ನೀಡಿ ಗೌರವಿಸಲಾಗುವುದು. ಬೆಸ್ಟ್ ಪ್ಲೇಯರ್ ಆಫ್ ದಿ-ಟೂರ್ನಮೆಂಟ್, ಟಾಪ್ ಸ್ಕೋರರ್, ಬೆಸ್ಟ್ ಗೋಲ್ ಕೀಪರ್, ಬೆಸ್ಟ್ ಡಿಫೆಂಡರ್, ಬೆಸ್ಟ್ ಮಹಿಳಾ ಆಟಗಾರ್ತಿ, ಬೆಸ್ಟ್ ಎಮರ್ಜಿಂಗ್ ಪ್ಲೇಯರ್, ಫೈನಲ್ ಹೀರೋ ಆಫ್-ದಿ ಮ್ಯಾಚ್ ಹಾಗೂ ಲೀಗ್ ಮಾದರಿಯ ಎಲ್ಲಾ ಪಂದ್ಯದಲ್ಲಿ ಹೀರೋ-ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.