ಸುಂಟಿಕೊಪ್ಪ, ಅ. ೩೦ : ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಇತ್ತೀಚೆಗೆ ಪಟ್ಟಣದಲ್ಲಿ ಉದ್ಘಾಟನೆಗೊಂಡ ಖಾಸಗಿ ಆಸ್ಪತ್ರೆಗೆ ಅಧ್ಯಕ್ಷರ ಗಮನಕ್ಕೆ ತಾರದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಅವರು ನಿರಪೇಕ್ಷಣಾ ಪತ್ರ (ಎನ್‌ಓಸಿ) ನೀಡಿದ್ದು, ಈ ಬಗ್ಗೆ ಸದಸ್ಯ ಜಿನಾಸುದ್ಧಿನ್ ಪ್ರಶ್ನಿಸಿ ದಾಖಲೆ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ನಿರಾಕರಿಸಿದ ಪಿಡಿಓ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಸದಸ್ಯರು ಸಭೆಯಿಂದ ಹೊರ ನಡೆದರು. ಇದರಿಂದ ಕೆಲಕಾಲ ಗೊಂದಲ ಏರ್ಪಟ್ಟಿತು. ಅಲ್ಲದೆ ಈ ಪಿಡಿಓ ಇರುವವರೆಗೆ ಪಂಚಾಯಿತಿಗೆ ಬರಲು ಸಾಧ್ಯವಿಲ್ಲ ಎಂದು ಸದಸ್ಯರು ಹರಿಹಾಯ್ದು ಸಭೆ ಬಹಿಷ್ಕರಿಸಿದರು. ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಸದಸ್ಯರ ಮನವೊಲಿಸಲು ಮುಂದಾದರೂ ಸಭೆ ಮಾತ್ರ ನಡೆಯಲಿಲ್ಲ. ನಂತರ ಸದಸ್ಯರಾದ ಸೋಮನಾಥ, ಆಲಿಕುಟ್ಟಿ ನಾಗರತ್ನ, ಉಪಾಧ್ಯಕ್ಷೆ ಶಿವಮ್ಮ, ಜಿನಾಸುದ್ಧೀನ್, ರಾಜಾತಿ ಮಂಗಳ, ರೇಷ್ಮ, ಸಬೀರ್, ರಫೀಕ್ ಖಾನ್ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.