*ಸಿದ್ದಾಪುರ, ಅ. ೨೨: ಕಸಪುರವಾಗಿ ಮಾರ್ಪಟ್ಟಿರುವ ಸಿದ್ದಾಪುರ ಗ್ರಾ.ಪಂ.ಗೆ ಇಚ್ಛಾಶಕ್ತಿಯ ಕೊರತೆ ಎದುರಾಗಿದೆ. ತ್ಯಾಜ್ಯ ವಿಲೇವಾರಿ ಘಟಕದ ನಿರ್ಮಾಣ ಕಾರ್ಯ ಪೂರ್ಣಗೊಳ್ಳದೆ ಇರುವುದು ಕಸದ ಸಮಸ್ಯೆ ಉಲ್ಬಣಿಸಲು ಪ್ರಮುಖ ಕಾರಣವಾಗಿದ್ದರೂ ಪಂಚಾಯಿತಿ ಆಡಳಿತ ಮಾತ್ರ ಜಾಣ ಮೌನಕ್ಕೆ ಶರಣಾಗಿದೆ.
ಜಿಲ್ಲೆಯ ಅತ್ಯಂತ ದೊಡ್ಡ ಗ್ರಾ.ಪಂ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿದ್ದಾಪುರ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಜನಸಂಖ್ಯೆ ಮತ್ತು ವ್ಯಾಪಾರ ವಹಿವಾಟು ಹೆಚ್ಚಾದಂತೆ ಪ್ರತಿದಿನ ಟನ್ಗಟ್ಟಲೆ ಕಸ ಉತ್ಪತ್ತಿಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ಸಮಸ್ಯೆ ದೊಡ್ಡ ಕಗ್ಗಂಟಾಗಿ ಪರಿಣಮಿಸಿದ ಹಿನ್ನೆಲೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ರೀನಾ ತುಳಸಿ ಅವರು ಕಸ ವಿಲೇವಾರಿಗೆ ಜಾಗ ಹುಡುಕಲು ಸತತ ಪ್ರಯತ್ನ ನಡೆಸಿದರು. ಇವರ ಮನವಿಗೆ ಸ್ಪಂದಿಸಿದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ಮಾಲ್ದಾರೆ ಗ್ರಾ.ಪಂ.ಗೆ ಸೇರಿದ ಘಟ್ಟದಹಳ್ಳದ ಸರ್ವೆ ಸಂಖ್ಯೆ ೨೮/೨ ರಲ್ಲಿದ್ದ ಒಂದು ಎಕರೆ ಪ್ರದೇಶದಲ್ಲಿ ಕಸ ವಿಲೇವಾರಿಗಾಗಿ ೫೦ ಸೆಂಟ್ ಮಾಲ್ದಾರೆ ಗ್ರಾ.ಪಂ.ಗೆ ಮತ್ತು ಉಳಿದ ೫೦ ಸೆಂಟ್ನ್ನು ಸಿದ್ದಾಪುರ ಗ್ರಾ.ಪಂ.ಗೆ ಮಂಜೂರು ಮಾಡಿಸಿದರು.
ಸಿದ್ದಾಪುರ ಪಂಚಾಯಿತಿಯ ಅಂದಿನ ಆಡಳಿತ ಮಂಡಳಿ ಮಂಜೂರಾದ ಜಾಗದಲ್ಲಿ ಸುಮಾರು ರೂ. ೮ ಲಕ್ಷ ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕದ ನಿರ್ಮಾಣ ಕಾರ್ಯವನ್ನು ಆರಂಭಿಸಿತು. ಶೇ. ೮೦ ರಷ್ಟು ಕಾಮಗಾರಿ ಪೂರ್ಣಗೊಳ್ಳುವ ವೇಳೆಗೆ ಚುನಾವಣೆ ಘೋಷಣೆಯಾಗಿ ಕಾಮಗಾರಿ ಸ್ಥಗಿತಗೊಂಡಿತು. ಅಲ್ಲದೆ ಕಾಮಗಾರಿ ಕೈಗೊಂಡ ಗುತ್ತಿಗೆದಾರನಿಗೆ ಹಣ ಕೂಡ ಬಿಡುಗಡೆಯಾಗಿಲ್ಲ.
ಪಂಚಾಯಿತಿಯಲ್ಲಿ ಅಧಿಕಾರಕ್ಕೆ ಬಂದ ನೂತನ ಆಡಳಿತ ಮಂಡಳಿ ಇಲ್ಲಿಯವರೆಗೆ ತ್ಯಾಜ್ಯ ವಿಲೇವಾರಿ ಘಟಕದ ಕುರಿತು ಮಾಹಿತಿಯನ್ನೇ ಪಡೆದಿಲ್ಲ. ಸಿದ್ದಾಪುರ ತುಂಬಾ ಕಸ ತುಂಬಿದ್ದರೂ ತ್ವರಿತವಾಗಿ ಪರಿಹಾರ ಕಂಡುಕೊಳ್ಳುವ ಆಸಕ್ತಿ ಕಂಡು ಬರುತ್ತಿಲ್ಲ. ಉಳಿದಿರುವ ಶೇ.೨೦ ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಿ ಕಸ ವಿಲೇವಾರಿಯನ್ನು ವ್ಶೆಜ್ಞಾನಿಕ ರೂಪದಲ್ಲಿ ಕೈಗೊಂಡರೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
- ಅಂಚೆಮನೆ ಸುಧಿ