ಶನಿವಾರಸಂತೆ, ಅ. ೨೨: ರಾಜ್ಯ ಸರ್ಕಾರದ ಗಿರಿಜನ-ವಿಶೇಷ ಘಟಕ ಯೋಜನೆಯಡಿ ಶನಿವಾರಸಂತೆ ವಲಯ ಅರಣ್ಯ ಇಲಾಖೆ ಹಾಗೂ ಭಾರತ್ ಗ್ಯಾಸ್ ಸಹಭಾಗಿತ್ವದಲ್ಲಿ ಕಾಡಂಚಿನ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ೪೫ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಲಾಯಿತು.
ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಡಿ.ವಿ.ಪೂಜಾಶ್ರೀ ಮಾತನಾಡಿ, ಫಲಾನುಭವಿಗಳು ಕಾಡಿನ ಸೌದೆಗಾಗಿ ಅವಲಂಬಿತರಾಗಬಾರದು. ಪರಿಸರ ಮಾಲಿನ್ಯ ತಡೆಗಟ್ಟುವ ದೃಷ್ಟಿಯಿಂದ ಅವರಿಗೆ ವರ್ಷದಲ್ಲಿ ೨ ಬಾರಿ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಲಾಗುವುದು. ಸಿಲಿಂಡರ್ ಅನ್ನು ಹಾಳು ಮಾಡಬಾರದು. ಅರಣ್ಯ ಇಲಾಖೆ ನೀಡುವ ಟೋಕನ್ ಜಾಗ್ರತೆಯಾಗಿ ಇಟ್ಟುಕೊಂಡು ಉಚಿತ ಗ್ಯಾಸ್ ಅನ್ನು ರಿಫಿಲ್ ಮಾಡಿಸಿ ಬಳಕೆ ಮಾಡಬೇಕು ಎಂದರು.
ಭಾರತ್ ಗ್ಯಾಸ್ನ ಮಾಲೀಕ ಪರೀಕ್ಷಿತ್ ಮಾತನಾಡಿ, ಗ್ಯಾಸ್ ಸಿಲಿಂಡರ್ ಅನ್ನು ಜಾಗ್ರತೆಯಾಗಿ, ಸುರಕ್ಷಿತವಾಗಿ ಬಳಕೆ ಮಾಡಬೇಕು. ಪೈಪ್ ಮತ್ತು ರೆಗ್ಯುಲೇಟರ್ ಅನ್ನು ೫ ವರ್ಷಕ್ಕೊಮ್ಮೆ ಬದಲಾಯಿಸಬೇಕು. ನಿರ್ಲಕ್ಷö್ಯ ತೋರದೆ, ಟೋಕನ್ ಕಳೆದು ಹಾಕದೆ ಫಲಾನುಭವಿಗಳು ಕಚೇರಿಯ ಸಂಪರ್ಕದಲ್ಲಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ನಿಲುವಾಗಿಲು, ಕಟ್ಟೇಪುರ, ಮಾಲಂಬಿ ಇತರ ಗ್ರಾಮಗಳಿಂದ ಬಂದ ಪರಿಶಿಷ್ಟ ಜಾತಿಯ ೩೫ ಹಾಗೂ ಪರಿಶಿಷ್ಟ ಪಂಗಡದ ೧೫ ಫಲಾನುಭವಿಗಳು ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಂಡರು. ಉಪ ವಲಯ ಅರಣ್ಯಾಧಿಕಾರಿಗಳಾದ ಚಂದ್ರು ಬಣಕಾರ್ ಕಿರಣ್, ಸಿಬ್ಬಂದಿಗಳಾದ ಮಂಜೇಶ್, ಸಿಂಧು ಹಾಜರಿದ್ದರು.