ಮಡಿಕೇರಿ, ಅ. ೧೮: ರಸ್ತೆ ದುಸ್ತಿತಿಯ ಬಗ್ಗೆ ಸ್ಥಳೀಯ ಗ್ರಾ.ಪಂ.ಗೆ ಮನವಿ ಮಾಡಿ ಗಮನ ಸೆಳೆದರೂ ಸ್ಪಂದಿಸಿದ ಹಿನ್ನೆಲೆ ಗ್ರಾಮಸ್ಥರೇ ಸೇರಿ ತಮ್ಮ ಖರ್ಚಿನಲ್ಲಿ ರಸ್ತೆಯನ್ನು ಸಮರ್ಪಕಗೊಳಿಸಿರುವ ಪ್ರಕರಣ ವರದಿಯಾಗಿದೆ.
ವೀರಾಜಪೇಟೆ ಕ್ಷೇತ್ರಕ್ಕೆ ಒಳಪಡುವ ಮದೆನಾಡು ಗ್ರಾಮದ ಹುಲಿಮನೆ ಮತ್ತು ವಾಟೇರಿ ಮನೆಯ ಮುಖಾಂತರ ಬೆಳಕುಮಾನಿ ಶಾಲೆಗೆ ಗಬ್ಬಲಡ್ಕಬಾಣೆಯಿಂದ ಬೆಳಕುಮಾನಿ ಶಾಲೆಗೆ ಸೇರುವ ರಸ್ತೆ ತೀರಾ ಹದಗೆಟ್ಟಿತ್ತು. ಈ ಬಗ್ಗೆ ಗ್ರಾಮಸ್ಥರು ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಸ್ಪಂದನ ದೊರೆತಿರಲಿಲ್ಲ.
ಇದರಿಂದ ಬೇಸತ್ತ ಸ್ಥಳೀಯರಾದ ಹುಲಿಮನೆ, ವಾಟೇರಿ, ಸಿರಾಜಿ, ಕೊಲ್ಯದ, ಉಗ್ರಾಣಿ, ಕೆಮ್ಮಾರನ, ಗುಡ್ಡೆ, ನಿರ್ವಾಣಿ, ಬಾರನ ಹಾಗೂ ಪಟ್ಟಡ ಕುಟುಂಬಸ್ಥರು ತಾವೇ ತಮ್ಮ ಖರ್ಚಿನಲ್ಲಿ ತಾ. ೧೫ ರಂದು ಶ್ರಮದಾನದ ಮೂಲಕ ರಸ್ತೆ ದುರಸ್ತಿ ಕಾರ್ಯ ನಡೆಸಿದರು.
ದುರಸ್ತಿ ಕೆಲಸದ ಬಗ್ಗೆ ಮಾಹಿತಿಯಿದ್ದರೂ ಪಂಚಾಯಿತಿ ಜನಪ್ರತಿನಿಧಿಗಳು ಸ್ಥಳಕ್ಕೆ ಬಾರದ ಬಗ್ಗೆ ಸ್ಥಳೀಯರಾದ ಶ್ಯಾಮಸುಂದರ್, ನವೀನ್ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.