ಸಿದ್ದಾಪುರ, ಅ. ೧೮: ಉತ್ತಮ ಆರೋಗ್ಯಕ್ಕಾಗಿ ಸಮತೋಲನ ಆಹಾರ, ಕ್ರಮಬದ್ಧ ವ್ಯಾಯಾಮ ಹಾಗೂ ವಿಶ್ರಾಂತಿ ಅಗತ್ಯ ಎಂದು ಅಮೇರಿಕಾದ ಮಿನ್ನೆಸೋಟ ವೈದ್ಯಕೀಯ ವಿಶ್ವವಿದ್ಯಾನಿಲಯದ ತಜ್ಞ ವೈದ್ಯ ಡಾ. ತೇಜಸ್ ಅಭಿಪ್ರಾಯಪಟ್ಟರು.

ಸಿದ್ದಾಪುರದ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಸಭಾಂಗಣದಲ್ಲಿ ನಡೆದ ಖಿನ್ನತೆ ಮತ್ತು ಸಾಮಾನ್ಯ ರೋಗಗಳ ಕುರಿತ ವಿಷಯದಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿದರು. ಆಧುನಿಕ ಜೀವನದಲ್ಲಿ ಕೆಲಸದ ಒತ್ತಡದಿಂದಾಗಿ ಹಲವರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಅಗತ್ಯವಿರುವ ಆಹಾರ ಸೇವನೆಯಿಂದ ದೇಹದಲ್ಲಿ ಸಮತೋಲಕ ಕಾಯ್ದುಕೊಳ್ಳಬಹುದು. ಒತ್ತಡದ ಬದುಕಿಗೆ ವಿಶ್ರಾಂತಿ ಅಗತ್ಯವಾಗಿದೆ. ಆಗಿಂದಾಗೆ ಆರೋಗ್ಯ ತಪಾಸಣೆ ಮಾಡುವಂತೆ ಸಲಹೆ ನೀಡಿದರು.

ಕ್ಯಾನ್ಸರ್‌ನ ತಜ್ಞ ವೈದ್ಯರಾದ ಡಾ. ಮಾಧುರಿ ಕ್ಯಾನ್ಸರ್ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಸ್. ಸುನಿಲ್, ಸಮುದಾಯದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಘವೇಂದ್ರ, ಸೇಕ್ರೆಡ್ ಹಾರ್ಟ್ ಆಸ್ಪತ್ರೆಯ ವೈದ್ಯೆ ಡಾ. ಟೆಸ್ಸಿ, ಹಿಲ್ ಬ್ಲೂಮ್ಸ್ ಡಾ. ಅನಾಸ್, ಹಿರಿಯ ದಂತ ವೈದ್ಯ ಡಾ. ಜೀವನ್ ಹಾಜರಿದ್ದರು.