ವೀರಾಜಪೇಟೆ, ಅ. ೪: ಓಡಿಪಿ ಸಂಸ್ಥೆಯ ಸದಸ್ಯರಿಂದ ತಾಲೂಕಿನ ಗ್ರಾಮೀಣ ಭಾಗದ ನಿರ್ಮಲಗಿರಿ, ಕಲ್ಲುಬಾಣೆ, ಪೆರುಂಬಾಡಿ ಹಾಗೂ ಪಟ್ಟಣದ ನೆಹರು ನಗರ ಇತರೆಡೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮಾ ಅವರು ಮಾತನಾಡಿ, ಡೆಂಗ್ಯೂ ಜ್ವರ ಹರಡದಂತೆ ಪ್ರತಿಯೊಬ್ಬರು ಸ್ವಚ್ಛತೆ ಬಗ್ಗೆ ಹೆಚ್ಚು ಆದ್ಯತೆ ನೀಡುವಂತಾಗ ಬೇಕೆಂದರು. ಓಡಿಪಿ ಸಂಸ್ಥೆಯ ಕಾರ್ಯಕರ್ತೆ ರೀಟಾ ಜೋಸೆಫ್ ಅವರು ಮಾತನಾಡಿ, ಕಳೆದ ೪೦ ವರ್ಷಗಳಿಂದ ಓಡಿಪಿ ಸಂಸ್ಥೆ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಬಡ ಕುಟುಂಬದ ಮಹಿಳೆಯರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಇತ್ತೀಚೆಗೆ ಡೆಂಗ್ಯೂ ಜ್ವರ ಹರಡದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಓಡಿಪಿ ಸಂಸ್ಥೆ ಸದಸ್ಯರುಗಳು ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಆರ್ಜಿ ಗ್ರಾ.ಪಂ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್, ಕಾರ್ಯದರ್ಶಿ ರಾಜನ್, ಓಡಿಪಿ ಕಾರ್ಯಕರ್ತರಾದ ಅನಿಲ್ ಕುಮಾರ್, ಆಶಾ ಕಾರ್ಯಕರ್ತರಾದ ಗಾಯತ್ರಿ, ಶಶಿಕಲಾ, ಉಷಾ, ಮಹಿಳೋದಯ ಒಕ್ಕೂಟದ ಪ್ರಮುಖರು ಸದಸ್ಯರುಗಳು ಭಾಗವಹಿಸಿದ್ದರು.