ಸೋಮವಾರಪೇಟೆ, ಅ. ೪: ದುಡಿಯುವ ವರ್ಗಕ್ಕೆ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಸೂರಿಗಾಗಿ ಹೋರಾಟ ಸಮಿತಿ, ಭಾರತ ಕಮ್ಯೂನಿಸ್ಟ್ ಪಕ್ಷ, ಎಐಟಿಯುಸಿ ವತಿಯಿಂದ ತಾ. ೭ ರಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಸಿಪಿಐನ ಜಿಲ್ಲಾ ಸಹ ಕಾರ್ಯದರ್ಶಿ ಹೆಚ್.ಎಂ. ಸೋಮಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೦ ಗಂಟೆಗೆ ಕಕ್ಕೆಹೊಳೆ ಜಂಕ್ಷನ್ನಿAದ ಮೆರವಣಿಗೆಯಲ್ಲಿ ಸಾಗಿ ನಂತರ ಜೇಸಿ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಯಲಿದೆ. ಸಿಪಿಐನ ರಾಜ್ಯ ಕಾರ್ಯದರ್ಶಿ ಅಮ್ಜದ್, ಸಹ ಕಾರ್ಯದರ್ಶಿ ಧರ್ಮರಾಜ್ ಆಗಮಿಸಲಿದ್ದಾರೆ ಎಂದು ಹೇಳಿದರು.
ನಿವೇಶನ ರಹಿತ ಕೂಲಿ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ, ಬಾಡಿಗೆ ಮನೆ, ಲೈನ್ಮನೆಯಲ್ಲಿರುವ ಕಾರ್ಮಿಕರಿಗೆ ಉಚಿತ ನಿವೇಶನ ನೀಡುವಂತೆ ಆಗ್ರಹಿಸಿ ಕಳೆದ ೨೦ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಆದರೆ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸುತ್ತಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಪೈಸಾರಿ ಜಾಗವನ್ನು ಗುರುತಿಸಿ, ಪಂಚಾಯಿತಿಗೆ, ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಆದರೆ ಕಾರ್ಮಿಕರಿಗೆ ನಿವೇಶನ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸೋಮಪ್ಪ ದೂರಿದರು.
ಭೂ ಮಾಲೀಕರು, ಪ್ರಭಾವಿಗಳು, ಉಳ್ಳವರು ಸರ್ಕಾರ ಪೈಸಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಈಗ ಸರ್ಕಾರ ಒತ್ತುವರಿ ಭೂಮಿಯನ್ನು ಭೂ ಮಾಲೀಕರಿಗೆ ಭೋಗ್ಯಕ್ಕೆ ನೀಡಲು ಮುಂದಾಗಿದೆ. ಸಾಮಾಜಿಕ ನ್ಯಾಯ ಇಲ್ಲದಂತಾಗಿದೆ. ಶ್ರೀಮಂತ ಶ್ರೀಮಂತನಾಗಿಯೇ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದಾನೆ. ಶ್ರಮಿಕರು ಬಡವರಾಗಿಯೇ ಉಳಿದಿದ್ದಾರೆ. ದುಡಿಯುವ ವರ್ಗ ಹೋರಾಟಕ್ಕೆ ಮುಂದಾದರೆ, ಸರ್ಕಾರಕ್ಕೆ ಕಷ್ಟವಾಗುತ್ತದೆ. ದುಡಿಯುವ ವರ್ಗಕ್ಕೂ ಪೈಸಾರಿ ಜಾಗವನ್ನು ನೀಡಬೇಕು ಎಂದು ಆಗ್ರಹಿಸಿದರು.
ತಾ. ೭ ರಂದು ಜೇಸಿ ವೇದಿಕೆಗೆ ಶಾಸಕರು, ತಹಶೀಲ್ದಾರರು ಬಂದು ನಮ್ಮ ಮನವಿ ಪತ್ರವನ್ನು ಸ್ವೀಕರಿಸಿ, ನಮಗೆ ಭರವಸೆ ನೀಡಬೇಕು ಎಂದು ಒತ್ತಾಯಿಸಿದ ಅವರು, ಅಲ್ಲಿಯವರೆಗೆ ಪ್ರತಿಭಟನೆ ಮುಂದುವರೆಯಲಿದೆ ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಸಿಪಿಐ ತಾಲೂಕು ಕಾರ್ಯದರ್ಶಿ ಶಭಾನ, ಎಐಟಿಯುಸಿ ಸದಸ್ಯ ಸೂರ್ಯ ಇದ್ದರು.