ಮಡಿಕೇರಿ, ಅ. ೩: ಮಡಿಕೇರಿ ನಗರದಲ್ಲಿ ದಸರಾ ಉತ್ಸವ ಆರಂಭಗೊಳ್ಳುತ್ತಿರುವ ಬೆನ್ನಲ್ಲೇ ನಗರದ ಹೃದಯ ಭಾಗದಲ್ಲಿರುವ ಹಾಲಿನ ಬೂತ್‌ವೊಂದರಲ್ಲಿ ಕಳ್ಳತನ ನಡೆದಿರುವ ಘಟನೆ ನಡೆದಿದೆ. ಕಳೆದ ರಾತ್ರಿ ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿರುವ ಹಾಲಿನ ಬೂತ್‌ನಲ್ಲಿ ಈ ಕೃತ್ಯ ನಡೆದಿದೆ. ರಾತ್ರಿ ೧ ಗಂಟೆ ಸುಮಾರಿಗೆ ಬೈಕ್‌ನಲ್ಲಿ ಇಬ್ಬರು ವ್ಯಕ್ತಿಗಳು ಆಗಮಿಸಿದ್ದು, ಇವರಲ್ಲಿ ಒಬ್ಬ ಬೂತ್‌ನ ಬಾಗಿಲು ಒಡೆದು ಒಳ

(ಮೊದಲ ಪುಟದಿಂದ) ನುಗ್ಗಿರುವುದು ಸಿಸಿ ಟವಿ ಕ್ಯಾಮರಾದಲ್ಲಿ ದಾಖಲಾಗಿದೆ. ಬೂತ್‌ನಲ್ಲಿದ್ದ ರೂ. ೫೦ ಸಾವಿರ ನಗದು ಹಣವನ್ನು ಕಳವು ಮಾಡಲಾಗಿದೆ ಎಂದು ಮಾಲೀಕರು ಇದೀಗ ಪೊಲೀಸರಿಗೆ ದೂರು ನೀಡಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಮಲಯಾಳಂ ಭಾಷೆಯಲ್ಲಿ ಮಾತನಾಡುತ್ತಿದ್ದುದು ಸಿಸಿ ಟಿವಿ ಫೂಟೇಜ್‌ನ ಮೂಲಕ ತಿಳಿದು ಬಂದಿದೆ. ಪೊಲೀಸರು ಸಿಸಿ ಟಿವಿ ಫೂಟೇಜ್ ಅನ್ನು ಪಡೆದುಕೊಂಡಿದ್ದು ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ. ಪುಟಾಣಿನಗರದ ಮುರುಗನ್ ಎಂಬವರಿಗೆ ಸೇರಿದ ಬೂತ್ ಇದಾಗಿದ್ದು, ಅವರು ರಾತ್ರಿ ೯.೩೦ರ ವೇಳೆಗೆ ಬಾಗಿಲು ಮುಚ್ಚಿ ತೆರಳಿದ್ದರು. ಬೆಳಿಗ್ಗೆ ೫.೩೦ಕ್ಕೆ ಆಗಮಿಸಿ ಅಂಗಡಿ ತೆರೆಯಲು ಮುಂದಾದಾಗ ಕಳ್ಳತನ ನಡೆದಿರುವುದು ತಿಳಿದು ಬಂದಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ನಗರ ಪೊಲೀಸರು ತನಿಖೆ ನಡೆಸುತ್ತಿದ್ದು ಆರೋಪಿಗಳನ್ನು ಪತ್ತೆ ಹಚ್ಚಿ ಶೀಘ್ರ ಬಂಧಿಸುವ ವಿಶ್ವಾಸವನ್ನು ನಗರ ವೃತ್ತ ನಿರೀಕ್ಷಕ ರಾಜು ಅವರು ವ್ಯಕ್ತಪಡಿಸಿದ್ದಾರೆ.