ಮಡಿಕೇರಿ, ಅ. ೩: ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪಲು ದಸರಾ ಅಂಗವಾಗಿ ರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿ ತಾ. ೧೧ ರಂದು ಬೆಳಿಗ್ಗೆ ೧೦ ಗಂಟೆಗೆ ಕಾವೇರಿ ಕಲಾ ವೇದಿಕೆಯಲ್ಲಿ ನಡೆಯಲಿದೆ.
ಈ ಬಾರಿಯ ಕವಿಗೋಷ್ಠಿಯಲ್ಲಿ ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಬ್ಯಾರಿ, ಯರವ, ಕುಂಬಾರ, ಹಿಂದಿ, ತಮಿಳು, ಮಲೆಯಾಳಂ, ಮರಾಠಿ, ಹೀಗೆ ೧೩ ಭಾಷೆಯ ಕವನಗಳನ್ನು ೭೮ ಕವಿಗಳು, ಕನ್ನಡ ಭಾಷೆಯ ಚುಟುಕು ಕವನವನ್ನು ೪ ಕವಿಗಳು ವಾಚಿಸಲಿದ್ದಾರೆ.
ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಮೂಡಿಸುವ ಸಲುವಾಗಿ ಈ ಬಾರಿ ವಿಶೇಷವಾಗಿ ಮಕ್ಕಳ ಕವನ ಗೋಷ್ಠಿ ಏರ್ಪಡಿಸಲಾಗಿದೆ. ೧೧ ಬಾಲ ಪ್ರತಿಭೆಗಳು ಕವನ ವಾಚನ ಮಾಡಲಿದ್ದಾರೆ.
ಕನ್ನಡದಲ್ಲಿ ೬ ಮತ್ತು ಇಂಗ್ಲೀಷಿನಲ್ಲಿ ೫ ಬಾಲ ಕವಿಗಳು ಕವನ ವಾಚನ ಮಾಡುವುದು ವಿಶೇಷವಾಗಿದೆ. ಉಳುವಂಗಡ ಕಾವೇರಿ ಉದಯ ಅವರು ಲೇಖನ ಸೌರಭ ಪುಸ್ತಕ ಇದೇ ಸಂದರ್ಭ ಬಿಡುಗಡೆ ಗೊಳಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾಹಿತಿ ನೀಡಿದ್ದಾರೆ.
ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಮತ್ತು ಕವಿ ನಾಗೇಶ್ ಕಾಲೂರು ವಹಿಸಲಿದ್ದು, ಉದ್ಘಾಟನೆಯನ್ನು ಹಿರಿಯ ಪತ್ರಕರ್ತ ಜೀವನ್ ಚಿಣ್ಣಪ್ಪ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಸಾಹಿತಿ, ನಿವೃತ್ತ ಪ್ರಾಂಶು ಪಾಲ ಡಾ. ಜೆ. ಸೋಮಣ್ಣ ಭಾಗವಹಿಸಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷರು ಮತ್ತು ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರೂ ಆದ ಕುಲ್ಲಚಂಡ ಪ್ರಮೋದ್ ಗಣಪತಿ, ಕವಿಗೋಷ್ಠಿ ಸಮಿತಿ ಸಂಚಾಲಕಿ ಎಸ್.ಎಂ ರಜಿನಿ, ಗೌರವ ಕಾರ್ಯದರ್ಶಿ ಶೀಲಾ ಬೋಪಣ್ಣ, ಕಾವೇರಿ ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಂದಾ ದೇವಯ್ಯ ಉಪಸ್ಥಿತರಿರಲಿದ್ದಾರೆ ಎಂದು ಕವಿಗೋಷ್ಠಿ ಸಮಿತಿ ಅಧ್ಯಕ್ಷÀ ಕೋಳೆರ ದಯಾ ಚಂಗಪ್ಪ ತಿಳಿಸಿದ್ದಾರೆ.