ಕುಶಾಲನಗರ, ಅ. ೩: ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಕೂಡ್ಲೂರು ಬಸವೇಶ್ವರ ಬಡಾವಣೆಯಲ್ಲಿ ವ್ಯಕ್ತಿಯೊಬ್ಬರ ಹತ್ಯೆ ನಡೆದಿದ್ದು, ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸವೇಶ್ವರ ಬಡಾವಣೆಯ ನಿವಾಸಿ ಜೋಸೆಫ್ (೫೫) ಮೃತ ದುರ್ದೈವಿ. ಬಸವೇಶ್ವರ ಬಡಾವಣೆಯ ಗಿರೀಶ್, ವಸಂತ್ ಹಾಗೂ ಜೋಸೆಫ್ ಮೂವರು ಸ್ನೇಹಿತರು. ಈ ಮೂವರ ನಡುವೆ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ನಡೆದು ಘರ್ಷಣೆ ನಡೆದಿದೆ ಎನ್ನಲಾಗಿದೆ. ಗಿರೀಶ್ ಎಂಬಾತ ಜೋಸೆಫ್ ಹಾಗೂ ವಸಂತ ಎಂಬವರ ಮೇಲೆ ಮಾರಕಾಯುಧದಿಂದ (ಕೊಡಲಿ) ಹಲ್ಲೆ ನಡೆಸಿದ ರಭಸಕ್ಕೆ ಜೋಸೆಫ್ ಕುತ್ತಿಗೆಯಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವಿಗೀಡಾದರು ಎನ್ನಲಾಗಿದೆ.
ಮತ್ತೋರ್ವ ವಸಂತ್ ಎಂಬವರ ತಲೆಗೂ ಕೊಡಲಿಯಿಂದ ಹಲ್ಲೆ ನಡೆಸಿದ್ದು ಗಂಭೀರವಾಗಿ ಗಾಯಗೊಂಡ ವಸಂತ್ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಆರೋಪಿ ಗಿರೀಶ್ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. -ಮೂರ್ತಿ, ಕೆ.ಕೆ.ಎನ್. ಶೆಟ್ಟಿ