ಮಡಿಕೇರಿ, ಅ. ೩: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಪ್ರಯುಕ್ತ ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಸಾಂಪ್ರದಾಯಿಕ ಪೂಜೆಯೊಂದಿಗೆ ಇಂದು ಚಾಲನೆ ನೀಡಲಾಯಿತು.

ನಗರದ ಪಂಪಿನ ಕೆರೆಯಲ್ಲಿ ಶಕ್ತಿ ದೇವತೆಗಳಾದ ಕುಂದುರುಮೊಟ್ಟೆ, ಶ್ರೀ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋಟೆ ಮಾರಿಯಮ್ಮ ಹಾಗೂ ಶ್ರೀ ಕಂಚಿಕಾಮಾಕ್ಷಿಯಮ್ಮ ಕರಗಗಳಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು. ಕುಂದುರುಮೊಟ್ಟೆ ಕರಗವನ್ನು ಪಿ.ಪಿ. ಚಾಮಿ, ದಂಡಿನ ಮಾರಿಯಮ್ಮ ಕರಗವನ್ನು ಉಮೇಶ್, ಕೋಟೆ ಮಾರಿಯಮ್ಮ ಕರಗವನ್ನು ಪಿ.ಬಿ. ಅನೀಶ್, ಕಂಚಿ ಕಾಮಾಕ್ಷಿ ಕರಗವನ್ನು ಪಿ.ಸಿ. ಉಮೇಶ್ ಹೊತ್ತಿದ್ದರು.

ಕರಗ ಸಾಗುವ ಮಾರ್ಗದಲ್ಲಿ ಭಕ್ತಿಯಿಂದ ಈಡುಗಾಯಿ, ಆರತಿ ಸೇವೆಗಳು ನಡೆದವು. ಮಡಿವಾಳ ಸಮಾಜದಿಂದ ಕರಗಗಳಿಗೆ ಪೂಜೆ ಸಲ್ಲಿಸಲಾಯಿತು.

ಪೂಜೆಯ ಬಳಿಕ ನಾಲ್ಕು ಕರಗಗಳು ಬನ್ನಿಮಂಟಪ, ಕೋದಂಡರಾಮ ದೇವಾಲಯ, ಬಸವೇಶ್ವರ ದೇವಾಲಯ, ಚೌಡೇಶ್ವರಿ ದೇವಾಲಯ, ಕನ್ನಿಕಾ ಪರಮೇಶ್ವರಿ ಸನ್ನಿಧಿಗೆ ಹಾಗೂ ಪೇಟೆ ಶ್ರೀ ರಾಮಮಂದಿರಕ್ಕೆ ತೆರಳಿ ಪೂಜೆಯ ಬಳಿಕ ತಮ್ಮ ತಮ್ಮ ದೇವಾಲಯಗಳಿಗೆ ಹಿಂತಿರುಗಿದವು. ಕೋದಂಡರಾಮ ದೇವಾಲಯದಲ್ಲಿ ಕರಗಗಳು ಆಗಮಿಸಿದ ಸಂದರ್ಭ ಭಕ್ತಾದಿಗಳಿಗೆ ಅನ್ನದಾನ ನಡೆಯಿತು. ಕರಗಗಳ ಮುಂಭಾಗದಲ್ಲಿ ಕಳಸಹೊತ್ತ ಮಹಿಳೆಯರು ಸಾಗಿದರೆ, ದಾರಿಯುದ್ದಕ್ಕೂ ರಂಗೋಲಿ ಹಾಕುವ ಮೂಲಕ ಭಕ್ತರು ಕರಗಗಳನ್ನು ಸ್ವಾಗತಿಸಿದರು. ಮಡಿಕೇರಿ ಶಾಸಕ ಡಾ. ಮಂತರ್‌ಗೌಡ, ಜಿಲ್ಲಾಧಿಕಾರಿ ಹಾಗೂ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರಾದ ವೆಂಕಟ್‌ರಾಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ, ಜಿ.ಪಂ. ಸಿಇಓ ಆನಂದ್ ಪ್ರಕಾಶ್ ಮೀನಾ, ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಉಪವಿಭಾಗಾಧಿಕಾರಿ ವಿನಾಯಕ್ ನರ್ವಾಡೆ, ಡಿವೈಎಸ್‌ಪಿ ಮಹೇಶ್‌ಕುಮಾರ್, ಇತರ ಅಧಿಕಾರಿ ವರ್ಗ, ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ,

(ಮೊದಲ ಪುಟದಿಂದ) ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಅರುಣ್ ಶೆಟ್ಟಿ, ದಶಮಂಟಪ ಸಮಿತಿ ಅಧ್ಯಕ್ಷ ಜಗದೀಶ್, ದಸರಾ ಸಮಿತಿ ಪದಾಧಿಕಾರಿಗಳು, ಉಪ ಸಮಿತಿಗಳ ಪ್ರಮುಖರು, ದೇವಾಲಯ ಸಮಿತಿಗಳ ಪ್ರಮುಖರು, ನಗರಸಭಾ ಸದಸ್ಯರುಗಳು, ಮತ್ತಿತರರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.