ವೀರಾಜಪೇಟೆ, ಅ. ೧: ಲಾರಿ ನಿಯಂತ್ರಣ ಕಳೆದು ಕೊಂಡ ಪರಿಣಾಮ ಸರಣಿ ಅಪಘಾತ ವಾದ ಘಟನೆ ಪಟ್ಟಣದಲ್ಲಿ ನಡೆದಿದೆ.

ಅಪಘಾತದಿಂದ ಎರಡು ಆಟೋ, ಖಾಸಗಿ ಬಸ್ ಹಾಗೂ ಸ್ಕೂಟರ್‌ಗೆ ಹಾನಿಯಾಗಿದ್ದು, ಆಟೋ ಚಾಲಕರೋರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೀರಾಜಪೇಟೆ ಬಳಿಯಿಂದ ಕಾಫಿ ಹೊಟ್ಟು ತುಂಬಿಕೊAಡು ತಮಿಳುನಾಡಿಗೆ ಸಾಗಿಸುತಿದ್ದ ಅಶೋಕ ಲೈಲ್ಯಾಂಡ್ ಲಾರಿ (ಟಿ.ಎನ್-೩೯ಸಿಬಿ-೧೮೦೦) ವೀರಾಜಪೇಟೆಯ ಎ.ಪಿ.ಜೆ.ಅಬ್ದುಲ್ ಕಲಾಂ ರಸ್ತೆ ಸುಣ್ಣದ ಬೀದಿ ಇಳಿಜಾರು ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಲಾರಿಯ ಮುಂದೆ ಸಾಗುತ್ತಿದ್ದ ೨ ಆಟೋಗಳಿಗೆ, ವಿಜಯ ನಗರದ ನಿವಾಸಿ ಲೋಕೇಶ್ ಎಂಬವರಿಗೆ ಸೇರಿದ ಎಲೆಕ್ಟಿçಕ್ ಸ್ಕೂಟರ್ ಹಾಗೂ ಖಾಸಗಿ ಬಸ್‌ಗೆ ಡಿಕ್ಕಿಯಾಗಿದೆ. ದಾಮೋದರನ್ ಎಂಬವರು ಚಾಲಿಸುತ್ತಿದ್ದ ಅಟೋ ಡಿಕ್ಕಿಯ ರಭಸಕ್ಕೆ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅವರ ಕಾಲು ಮತ್ತು ಕೈ ಭಾಗಗಳಿಗೆ ಸಣ್ಣಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗಾಯಾಳು ದಾಮೋದರನ್ ಅವರು ನೀಡಿರುವ ದೂರಿನ ಮೇರೆಗೆ ವೀರಾಜಪೇಟೆ ನಗರ ಠಾಣೆಯಲ್ಲಿ ಲಾರಿ ಚಾಲಕ ಪ್ರದೀಪನ್ ವಿರುದ್ಧ ಪ್ರಕರಣ ದಾಖಲಾಗಿದೆ. ಜಖಂಗೊAಡಿರುವ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು. ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

-ಕಿಶೋರ್ ಶೆಟ್ಟಿ