ಮಡಿಕೇರಿ, ಸೆ. ೨೯: ಶೈಕ್ಷಣಿಕ ಸಾಧನೆಯಿಂದ ಪ್ರತಿಯೊಬ್ಬರು ತಮ್ಮ ಭವಿಷ್ಯವನ್ನು ಸುಭದ್ರಪಡಿಸಿ ಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಪ್ರಸ್ತುತ ಅತಿ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡಿರ ಎಂ. ಪೂಣಚ್ಚ ಅವರು ಸಲಹೆ ನೀಡಿದರು.
ಮಡಿಕೇರಿ ಕೊಡವ ಸಮಾಜದಲ್ಲಿ ಶನಿವಾರದಂದು ಜರುಗಿದ ಕೊಡವ ವಿದ್ಯಾನಿಧಿ (ಕೂರ್ಗ್ ಎಜುಕೇಷನ್ ಫಂಡ್)ಯ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಶಿಕ್ಷಣದ ಮಹತ್ವ, ಶಿಕ್ಷಣ ಇರುವವರಿಗೂ, ಇಲ್ಲದವರಿಗೂ ಇರುವ ವ್ಯತ್ಯಾಸಗಳ ಕುರಿತು ಪ್ರಸ್ತಾಪಿಸಿದ ಅವರು, ಶಿಕ್ಷಣವಿದ್ದಲ್ಲಿ ಯಾವ ಕೆಲಸವನ್ನಾದರೂ ಸಾಧಿಸಬಹುದು. ಇದರೊಂದಿಗೆ ಶಿಕ್ಷಣ ನಿರಂತರವಾಗಿರಬೇಕು ಎಂದು ಅವರು ಕರೆ ನೀಡಿದರು.
ಕೊಡವ ವಿದ್ಯಾನಿಧಿಯನ್ನು ೧೮೬೩ರಲ್ಲೇ ಆಗಿನ ಹಿರಿಯರು ಸ್ಥಾಪಿಸಿರುವುದು ಅತ್ಯಂತ ಶ್ಲಾಘನೀಯ ವಾಗಿದೆ. ಇದೊಂದು ಪ್ರೌಢಿಮೆಯೂ ಆಗಿದ್ದು, ವಿದ್ಯಾರ್ಥಿ ವೇತನ ಪಡೆ ದವರು ತಮ್ಮ ಭವಿಷ್ಯ ಕಂಡುಕೊಳ್ಳು ವದರೊಂದಿಗೆ ಈ ಸಂಸ್ಥೆಗೂ ಸಹಕಾರ ನೀಡಬೇಕೆಂದು ಅವರು ಹೇಳಿದರು.
ನಿನ್ನೆಯ ಸಮಾರಂಭದಲ್ಲಿ ೨೪ ಮೆರಿಟ್ ವಿದ್ಯಾರ್ಥಿಗಳಿಗೆ ರೂ. ೨.೮೧ ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಳೆದ ಸಾಲಿನಲ್ಲಿ ಒಟ್ಟು ರೂ. ೬೪ ಲಕ್ಷ ವಿದ್ಯಾರ್ಥಿವೇತನ ನೀಡಲಾಗಿದೆ. ಈ ಬಾರಿ ಅರ್ಜಿ ಸಲ್ಲಿಸಿದ್ದು, ಪರಿಗಣಿಸಲ್ಪಟ್ಟವರಿಗೆ ಅಕ್ಟೋಬರ್ - ನವೆಂಬರ್ ತಿಂಗಳಿನಿAದ ಚೆಕ್ ನೀಡಲಾಗುವುದು ಎಂದು ಕಾರ್ಯದರ್ಶಿ ಮೇದುರ ಪಿ. ಕಾವೇರಪ್ಪ ಅವರು ತಿಳಿಸಿದ್ದಾರೆ.
ವಿದ್ಯಾನಿಧಿಯ ಅಧ್ಯಕ್ಷ ಚೆಪ್ಪುಡಿರ ಎಂ. ಮುತ್ತಣ್ಣ ಅವರು ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಖಜಾಂಚಿ ಕೊಡಂದೇರ ಸರೋಜ್ ಮುತ್ತಣ್ಣ ಅತಿಥಿ ಪರಿಚಯಿಸಿ, ಉಪಾಧ್ಯಕ್ಷ ಅಜ್ಜಿಕುಟ್ಟಿರ ಎಸ್. ಮುತ್ತಣ್ಣ ವಂದಿಸಿದರು. ಕಾರ್ಯದರ್ಶಿ ಕಾವೇರಪ್ಪ, ಸಂಸ್ಥೆಯ ನಿರ್ದೇಶಕರು ಗಳು ಹಾಜರಿದ್ದರು.
ಈ ಮುನ್ನ ಸಂಸ್ಥೆಯ ವಾರ್ಷಿಕ ಮಹಾಸಭೆ ಅಧ್ಯಕ್ಷ ಚೆಪ್ಪುಡಿರ ಮುತ್ತಣ್ಣ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ನಿಧಿಯ ಕಾರ್ಯ ಚಟುವಟಿಕೆ, ಕಳೆದ ಸಾಲಿನ ವರದಿ, ಲೆಕ್ಕಪತ್ರದ ಕುರಿತಾಗಿ ಚರ್ಚೆ ನಡೆಯಿತು.