ಗೋಣಿಕೊಪ್ಪಲು, ಸೆ. ೨೯: ಗೋಣಿಕೊಪ್ಪ ದಸರಾ ಜನೋತ್ಸವ ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದ್ದು, ವ್ಯವಸ್ಥಿತ ಕಾರ್ಯ ಕ್ರಮಗಳನ್ನು ನಡೆಸುವುದರೊಂದಿಗೆ ಶಾಂತಿ, ಸುವ್ಯವಸ್ಥೆ ಪಾಲನೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅಧಿಕಾರಿಗಳಿಗೆ ಹಾಗೂ ದಸರಾ ಸಮಿತಿ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.
ವೀರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ಗೋಣಿಕೊಪ್ಪ ದಸರಾ ಜನೋತ್ಸವ ಕಾರ್ಯಕ್ರಮದ ಅಂಗವಾಗಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ದಸರಾ ಸಮಿತಿ, ಉಪಸಮಿತಿ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು. ದಶಮಂಟಪಗಳು ಸಂಚರಿಸುವ ಮಾರ್ಗದಲ್ಲಿ ವಿದ್ಯುತ್ ಲೈನ್ಗಳನ್ನು ಸರಿಪಡಿಸಬೇಕು, ಗುಂಡಿ ಬಿದ್ದ ರಸ್ತೆ ದುರಸ್ತಿಗೊಳಿಸಬೇಕು, ಸ್ತಬ್ಧಚಿತ್ರ ಕಾರ್ಯಕ್ರಮದಲ್ಲಿ ಇಲಾಖೆಗಳು ಭಾಗವಹಿಸಬೇಕು ಎಂದು ಪೊನ್ನಣ್ಣ ನಿರ್ದೇಶಿಸಿದರು.
ಪಟ್ಟಣದಲ್ಲಿ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು. ದಸರಾ ಜನೋತ್ಸವ ಅರ್ಥಪೂರ್ಣವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಸಿಸಿ ಕ್ಯಾಮರ ಕಣ್ಗಾವಲು
ಈ ಬಾರಿ ದಸರಾ ಜನೋತ್ಸವದಲ್ಲಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು. ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ಹೆಚ್ಚಾಗಿ ನೀಡಬೇಕು. ಸರ್ಕಾರದಿಂದ ಬಿಡುಗಡೆ ಆಗುವ ಅನುದಾನದಲ್ಲಿ ನಗರದ ಆಯಾಕಟ್ಟಿನ ಕಡೆಯಲ್ಲಿ ೧೦ ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು.
೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಇದರಿಂದ ನಗರದಲ್ಲಿ ನಡೆಯುವ ಎಲ್ಲಾ ಮಾಹಿತಿ ತಿಳಿಯಲು ಅನುಕೂಲವಾಗಲಿದೆ ಎಂದು ಪೊನ್ನಣ್ಣ ಸಲಹೆ ನೀಡಿದರು. ಗೋಣಿಕೊಪ್ಪ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಮೂದೋಳ್ ಮಾತನಾಡಿ, ಸಿಸಿ ಕ್ಯಾಮರಾಗಳ ಅಳವಡಿಕೆಯಿಂದ ಸಹಕಾರಿ ಆಗಲಿದೆ. ಇದನ್ನು ಮೇಲ್ವಿಚಾರಣೆ ಮಾಡಲು ಓರ್ವ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತದೆ. ಉಮಾಮಹೇಶ್ವರಿ ದೇವಾಲಯ ಸಮೀಪ, ಬಸ್ ನಿಲ್ದಾಣ, ಪೊನ್ನಂಪೇಟೆ ರಸ್ತೆ ಜಂಕ್ಷನ್, ಬೈಪಾಸ್ ಜಂಕ್ಷನ್, ಪಾಲಿಬೆಟ್ಟ ರಸ್ತೆ ಜಂಕ್ಷನ್ ಹಾಗೂ ಕಾವೇರಿ ಕಲಾ ವೇದಿಕೆಯ ಬಳಿಯಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸುವ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು.
ದಸರಾ ಅನುದಾನ ಕ್ಯಾಮರ ಅಳವಡಿಕೆ ವೆಚ್ಚ ಭರಿಸುವಂತೆ ದಸರಾ ಸಮಿತಿಯ ಅಧ್ಯಕ್ಷ ಪ್ರಮೋದ್ ಗಣಪತಿ ಅವರಿಗೆ ಶಾಸಕ ಪೊನ್ನಣ್ಣ ತಿಳಿಸಿದರು.
ದಸರಾ ಜನೋತ್ಸವ ಸುಸೂತ್ರವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ೫೦೦ ಕ್ಕೂ ಹೆಚ್ಚಿನ ಸಿಬ್ಬಂದಿಗಳ ನಿಯೋಜನೆಗೆ ಕ್ರಮವಹಿಸಲಾಗಿದೆ. ವಾಚ್ ಟವರ್ ಮೂಲಕ ಚಟುವಟಿಕೆಗಳ ಮಾಹಿತಿ ಸಂಗ್ರಹ, ವಾಹನ ನಿಲುಗಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಡಿವೈಎಸ್ಪಿ ಮೋಹನ್ ಕುಮಾರ್ ಸಭೆಯಲ್ಲಿ ಮಾಹಿತಿ ಒದಗಿಸಿದರು.
ಮಂಟಪಗಳು ಹಾದು ಹೋಗುವ ಮಾರ್ಗದಲ್ಲಿ ವಿದ್ಯುತ್ ಲೈನ್ ಸರಿಪಡಿಸುವುದು, ಹಲವೆಡೆ ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡುವುದು ಇವುಗಳ ಬಗ್ಗೆ ಕ್ರಮ ಕೈಗೊಳ್ಳಲು ಗೋಣಿಕೊಪ್ಪ ಚೆಸ್ಕಾಂ ಎಇಇ ಅವರಿಗೆ ಶಾಸಕರು ಸೂಚನೆ ನೀಡಿದರು.
ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಇಲಾಖೆಯ ಕಾರ್ಯಕ್ರಮಗಳ ಸ್ತಬ್ಧ ಚಿತ್ರಗಳು ಕಡ್ಡಾಯವಾಗಿ ಇರಬೇಕು. ಈ ಬಗ್ಗೆ ತಾಲೂಕು ಇಒ ಅಪ್ಪಣ್ಣ ಜವಾಬ್ದಾರಿ ನಿರ್ವಹಣೆ ಮಾಡುವಂತೆ ಶಾಸಕರು ಸೂಚನೆ ನೀಡಿದರು.
ಹತ್ತು ದಿನಗಳ ಕಾಲ ನಡೆಯುವ ದಸರಾ ಜನೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬರಬೇಕು, ಯಾವುದೇ ನ್ಯೂನತೆ ಕಂಡುಬAದರೆ ಅದನ್ನು ತಕ್ಷಣ ಸರಿಪಡಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಹಾಗೂ ಭಾಗವಹಿಸಿದ್ದ ಸಮಿತಿ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.
ನಾಡ ಹಬ್ಬ ದಸರಾ ಸಮಿತಿಯ ಕಾರ್ಯದರ್ಶಿ ಪ್ರಭಾಕರ್ ನೆಲ್ಲಿತ್ತಾಯ ಮಾತನಾಡಿ, ಸ್ತಬ್ಧ ಚಿತ್ರಗಳ ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನದ ಬಗ್ಗೆ ಗಮನ ಸೆಳೆದರು.
ದಶಮಂಟಪ ಸಮಿತಿ ಅಧ್ಯಕ್ಷ ಜಮ್ಮಡ ಅರಸು ಅಪ್ಪಣ್ಣ ಮಾತನಾಡಿ, ಮಂಟಪಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಕೋರಿದರು.
ಸಭೆಯಲ್ಲಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಗೋಣಿಕೊಪ್ಪ ಗ್ರಾ.ಪಂ. ಪಿಡಿಒ ತಿಮ್ಮಯ್ಯ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರೀತಿ ಚಿಕ್ಕಮಾದು, ಗಿರಿಜನ ಕಲ್ಯಾಣ ಇಲಾಖೆಯ ನವೀನ್ ಕುಮಾರ್ ಸೇರಿದಂತೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ವಿವಿಧ ಮುಖಂಡರು ಹಾಜರಿದ್ದರು.
ಗೋಣಿಕೊಪ್ಪ ಕಾವೇರಿ ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಕಂದಾ ದೇವಯ್ಯ, ಸ್ವಾಗತಿಸಿ, ವಂದಿಸಿದರು.