ಬೆಂಗಳೂರಿನಲ್ಲಿ ನೆಲೆಸಿದ್ದ ಪಾಕಿಸ್ತಾನಿ ಪ್ರಜೆಗಳ ಬಂಧನ
ಬೆAಗಳೂರು, ಸೆ. ೩೦: ಕಳೆದ ಆರು ವರ್ಷಗಳಿಂದ ನಕಲಿ ಗುರುತಿನೊಂದಿಗೆ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಪ್ರಜೆ ಆತನ ಪತ್ನಿ ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ವಿಚಾರಣೆಯ ಪ್ರಕಾರ, ಪಾಕ್ ಪ್ರಜೆ ಪತ್ನಿ ಬಾಂಗ್ಲಾ ದೇಶದವರಾಗಿದ್ದು ಢಾಕಾದಲ್ಲಿ ವಿವಾಹವಾಗಿದ್ದರು. ೨೦೧೪ರಲ್ಲಿ ದೆಹಲಿಗೆ ಬಂದಿದ್ದ ದಂಪತಿಯರು ನಂತರ ೨೦೧೮ರಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಬಂಧಿತ ಇನ್ನಿಬ್ಬರು ಆತನ ಸೋದರ ಅಳಿಯಂದಿರು ಎಂದು ತಿಳಿದುಬಂದಿದೆ. ಬೆಂಗಳೂರಿನ ಹೊರವಲಯದ ಜಿಗಣಿಯಲ್ಲಿ ಬೆಂಗಳೂರು ಪೊಲೀಸರು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದರು. ಜಿಗಣಿ ಇನ್ಸ್ಪೆಕ್ಟರ್ ಈ ಬಗ್ಗೆ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದೇ ಕುಟುಂಬದ ನಾಲ್ವರು ಅಕ್ರಮವಾಗಿ ಅಕ್ರಮ ದಾಖಲೆಗಳ ಸಹಾಯದಿಂದ ಇಲ್ಲಿ ವಾಸವಿದ್ದರು. ಇದೀಗ ಪ್ರಕರಣ ದಾಖಲಿಸಿಕೊಂಡು ಆ ನಾಲ್ವರನ್ನು ವಿಚಾರಣೆ ನಡೆಸಲಾಗುತ್ತಿದೆ. ಸಂಪೂರ್ಣ ವಿಚಾರಣೆ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಂಜನ್ ಗೊಗೊಯಿ ಪ್ರತಿವಾದಿಯಾಗಿಸಿ ಅರ್ಜಿ : ಸುಪ್ರೀಂಕೋರ್ಟ್ ತರಾಟೆ
ನವದೆಹಲಿ, ಸೆ. ೩೦: ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರಲ್ಲಿ (ಪಿಐಎಲ್) ಪ್ರತಿವಾದಿಯನ್ನಾಗಿಸಿದ್ದಕ್ಕೆ ಹಾಗೂ ಸೇವಾ ತಕರಾರಿಗೆ ಸಂಬAಧಿಸಿದ ಅರ್ಜಿಯೊಂದನ್ನು ವಜಾಗೊಳಿಸಿದ್ದಕ್ಕಾಗಿ ಅವರ ವಿರುದ್ಧ ಆಂತರಿಕ ವಿಚಾರಣೆಗೆ ಆದೇಶಿಸುವಂತೆ ಕೋರಿದ್ದಕ್ಕಾಗಿ ಸುಪ್ರೀಂಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನ್ಯಾಯಮೂರ್ತಿಯೊಬ್ಬರನ್ನು ಪ್ರತಿವಾದಿಯನ್ನಾಗಿಸಿ ನೀವು ಪಿಐಎಲ್ ಸಲ್ಲಿಸಿದ್ದು ಹೇಗೆ? ತುಸುವಾದರೂ ಘನತೆ ಇರಬೇಕು. ನ್ಯಾಯಮೂರ್ತಿಯೊಬ್ಬರ ವಿರುದ್ಧ ಆಂತರಿಕ ವಿಚಾರಣೆ ಆಗಬೇಕು ಎಂದು ಹೀಗೇ ಸುಮ್ಮನೆ ಹೇಳಲು ಅವಕಾಶವಿಲ್ಲ. ಗೊಗೊಯಿ ಅವರು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಆಗಿದ್ದವರು ಎಂದು ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಪುಣೆ ಮೂಲದ ಅರ್ಜಿದಾರರಿಗೆ ಹೇಳಿದೆ. ಗೊಗೊಯಿ ಅವರು ನಿವೃತ್ತ ಸಿಜೆಐ ನ್ಯಾಯಪೀಠದ ಎದುರು ನಿಮಗೆ ಜಯ ಸಿಗಲಿಲ್ಲ ಎಂಬ ಕಾರಣಕ್ಕೆ ನ್ಯಾಯಮೂರ್ತಿಯೊಬ್ಬರ ವಿರುದ್ಧ ಆಂತರಿಕ ವಿಚಾರಣೆ ನಡೆಯಬೇಕು ಎಂದು ಹೇಳಲು ಅವಕಾಶ ಇಲ್ಲ. ಇದನ್ನು ನಾವು ಸಹಿಸುವುದಿಲ್ಲ ಎಂದು ಪೀಠವು ಹೇಳಿದೆ. ತಮ್ಮನ್ನು ಸೇವೆಯಿಂದ ತೆಗೆದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಗೊಗೊಯಿ ನೇತೃತ್ವದ ಪೀಠವು ಈ ಹಿಂದೆ ವಜಾಗೊಳಿಸಿತ್ತು. ಇದಾದ ನಂತರ ಅರ್ಜಿದಾರರು ಪಿಐಎಲ್ ಸಲ್ಲಿಸಿದ್ದರು.
ಉಡುಗೊರೆಗಳ ಆಮಿಷವೊಡ್ಡಿ ರೂ. ೧.೩ ಕೋಟಿ ವಂಚನೆ
ಬೆAಗಳೂರು, ಸೆ. ೩೦: ಅಂರ್ರಾಷ್ಟಿçÃಯ ಆರ್ಥಿಕ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ೩೩ ವರ್ಷದ ಮಹಿಳೆಯೊಬ್ಬರಿಗೆ ಟರ್ಕಿಶ್ ಸೂಟರ್ ಹಾಗೂ ಚಿನ್ನದ ಉಡುಗೊರೆಗಳ ಆಮಿಷವೊಡ್ಡಿ ೧.೩ ಕೋಟಿ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖ್ಯಾತ ಮ್ಯಾಟ್ರಿಮೊನಿಯಲ್ ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿಯೋರ್ವ ಮಹಿಳೆಗೆ ವಂಚನೆ ಮಾಡಿದ್ದು, ತಾನು ಟರ್ಕಿಯಲ್ಲಿರುವ ಭಾರತೀಯ ಎಂದು ತನ್ನನ್ನು ತಾನು ಪರಿಚಯಿಸಿಕೊಂಡಿದ್ದಾನೆ. ಉಡುಗೊರೆಯಾಗಿ ಬಹಳಷ್ಟು ಚಿನ್ನವನ್ನು ತಂದಿದ್ದು, ಬೆಂಗಳೂರು ವಿಮಾನ ನಿಲ್ದಾಣ ಅಧಿಕಾರಿಗಳು ನನ್ನನ್ನು ವಶಕ್ಕೆ ಪಡೆದಿದ್ದಾರೆ ಎಂದು ವ್ಯಕ್ತಿ ಮಹಿಳೆಗೆ ಹೇಳಿದ್ದಾರೆ. ತಾನು ಹೇಳಿದ್ದು ನಿಜ ಎಂದು ನಂಬಿಸುವುದಕ್ಕಾಗಿ ವಿಮಾನ ಪ್ರಯಾಣದ ನಕಲಿ ಟಿಕೆಟ್ಗಳನ್ನು ಕಳಿಸಿದ್ದಾನೆ.
ಸಿರಿಯಾದಲ್ಲಿ ವೈಮಾನಿಕ ದಾಳಿ : ೩೭ ಉಗ್ರರನ್ನು ಹೊಡೆದುರುಳಿಸಿದ ಅಮೇರಿಕಾ ಸೇನೆ
ವಾಷಿಂಗ್ಟನ್, ಸೆ. ೩೦: ಸಿರಿಯಾದಲ್ಲಿ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೇರಿಕಾ ಸೇನೆ ನಡೆಸಿದ ವೈಮಾನಿಕ ದಾಳಿಗಳಲ್ಲಿ ೩೭ ಉಗ್ರರನ್ನು ಹೊಡೆದುರುಳಿಸಿರುವುದಾಗಿ ವರದಿಯಾಗಿದೆ. ಅಮೇರಿಕಾ ಸೇನೆ ನಡೆಸಿದ ದಾಳಿಯಲ್ಲಿ ಅಲ್ಖೈದಾ ಜೊತೆ ನಂಟು ಹೊಂದಿರುವ ಸಂಘಟನೆಯ ೩೭ ಉಗ್ರರು ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ನಾಯಕರೂ ಸೇರಿದ್ದಾರೆ. ಸಿರಿಯಾದ ವಾಯವ್ಯ ಭಾಗದಲ್ಲಿ ಸೆ.೨೪ರಂದು ನಡೆಸಿದ ದಾಳಿಯಲ್ಲಿ ಹುರಾಸ್ ಅಲ್ ದೀನ್ ಸಂಘಟನೆಯ ಒಂಬತ್ತು ಉಗ್ರರು ಹಾಗೂ ಸೆ. ೧೬ ರಂದು ಮಧ್ಯ ಸಿರಿಯಾದಲ್ಲಿ ನಡೆಸಿದ ದಾಳಿಯಲ್ಲಿ ೨೮ ಉಗ್ರರು ಬಲಿಯಾಗಿದ್ದಾರೆ ಎಂದು ಅಮೆರಿಕ ಸೇನೆಯ ಮೂಲಗಳು ತಿಳಿಸಿವೆ. ಸೆಪ್ಟೆಂಬರ್ನ ೧೬ ಮತ್ತು ೨೪ರಂದು ನಡೆಸಿದ ವೈಮಾನಿಕ ದಾಳಿಯಲ್ಲಿ ಯಾವುದೇ ನಾಗರಿಕರಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಮೆರಿಕ ಪ್ರಕಟಣೆಯಲ್ಲಿ ತಿಳಿಸಿದೆ.
ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಅವಕಾಶ
ಬಳ್ಳಾರಿ, ಸೆ. ೩೦: ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ನಲ್ಲಿ ಬಿಗ್ ರಿಲೀಫ್ ದೊರೆತಿದೆ. ಬಳ್ಳಾರಿಗೆ ತೆರಳಲು ಅವರಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿ ಸೋಮವಾರ ಆದೇಶಿಸಿದೆ. ಇದರೊಂದಿಗೆ, ಯಾವುದೇ ಪೂರ್ವಾನುಮತಿ ಇಲ್ಲದೆ ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಅವಕಾಶ ದೊರೆತಂತಾಗಿದೆ. ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆ ಕಳೆದ ಒಂದೂವರೆ ದಶಕಗಳಿಂದ ತವರು ಜಿಲ್ಲೆಯ ಪ್ರವೇಶವಿಲ್ಲದೆ ವನವಾಸ ಅನುಭವಿಸಿದ್ದ ಮಾಜಿ ಸಚಿವ, ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಕೊನೆಗೂ ಅನುಮತಿ ನೀಡಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಜನಾರ್ದನ ರೆಡ್ಡಿಗೆ ಜಾಮೀನು ನೀಡುವಾಗ ಕೋರ್ಟ್ ಬಳ್ಳಾರಿಗೆ ಭೇಟಿ ನೀಡದಂತೆ ನಿರ್ಬಂಧ ಹೇರಿತ್ತು. ಆದ್ದರಿಂದ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಬೆಂಗಳೂರಿನ ‘ಪಾರಿಜಾತ' ನಿವಾಸದಲ್ಲಿಯೇ ವಾಸ್ತವ್ಯ ಹೂಡಿದ್ದರು.
ಹಿಟ್ಲರ್ ನಂತರದ ಅತಿದೊಡ್ಡ ಭಯೋತ್ಪಾದಕ ನೆತನ್ಯಾಹು - ಮೆಹಬೂಬಾ ಮುಫ್ತಿ
ಶ್ರೀನಗರ, ಸೆ. ೩೦: ಯಹೂದಿ ನಾಯಕ ಪ್ಯಾಲೆಸ್ತೀನ್ ಮತ್ತು ಲೆಬನಾನ್ ಅನ್ನು ‘ಗ್ಯಾಸ್ ಚೇಂಬರ್'ಗಳನ್ನಾಗಿ ಮಾಡಿರುವುದರಿಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಡಾಲ್ಫ್ ಹಿಟ್ಲರ್ ನಂತರದ ಅತಿದೊಡ್ಡ ಭಯೋತ್ಪಾದಕ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಮೊನ್ನೆಯಷ್ಟೆ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದ ಮುಪ್ತಿ ಲೆಬನಾನ್ ಮತ್ತು ಪ್ಯಾಲೆಸ್ತೀನ್ ಜನರಿಗೆ ಬೆಂಬಲ ನೀಡಲು ತನ್ನ ಚುನಾವಣಾ ಪ್ರಚಾರವನ್ನು ಒಂದು ದಿನದ ಮಟ್ಟಿಗೆ ರದ್ದುಗೊಳಿಸಿದ್ದರು. ಅಂರ್ರಾಷ್ಟಿçÃಯ ಕ್ರಿಮಿನಲ್ ಕೋರ್ಟ್ ನೆತನ್ಯಾಹು ವಿರುದ್ಧ ತೀರ್ಪು ನೀಡಿದೆ. ಪ್ಯಾಲೇಸ್ಟಿನ್ನಲ್ಲಿ ಹತ್ಯಾಕಾಂಡ ನಡೆಸಿದಂತೆ ಇದೀಗ ಲೆಬನಾನ್ನಲ್ಲೂ ಜನರನ್ನು ಕೊಲ್ಲುತ್ತಿದ್ದಾರೆ. ಇದಕ್ಕೆ ಬರೀ ಖಂಡನೆ ಮಾತ್ರ ಸಾಕಾಗುವುದಿಲ್ಲ ಎಂದು ಮೆಹಬೂಬಾ ಮುಪ್ತಿ ಹೇಳಿದ್ದಾರೆ. ನೆತನ್ಯಾಹುವನ್ನು ಹಿಟ್ಲರ್ ನಂತರದ ಅತಿದೊಡ್ಡ ಭಯೋ ತ್ಪಾದಕ ಎಂದು ಕರೆದ ಮಾಜಿ ಮುಖ್ಯಮಂತ್ರಿ, ಹಿಟ್ಲರ್ ಜನರನ್ನು ಕೊಲ್ಲಲು ಗ್ಯಾಸ್ ಚೇಂಬರ್ಗಳನ್ನು ಸ್ಥಾಪಿಸಿದ್ದನು. ಆದರೆ ನೆತನ್ಯಾಹು ಪ್ಯಾಲೆಸ್ಟೈನ್ ಮತ್ತು ಲೆಬನಾನ್ಅನ್ನು ಗ್ಯಾಸ್ ಚೇಂಬರ್ಗಳಾಗಿ ಪರಿವರ್ತಿಸಿದ್ದಾರೆ. ಅಲ್ಲಿ ಅವರು ಸಾವಿರಾರು ಜನರನ್ನು ಕೊಲ್ಲುತ್ತಿದ್ದಾರೆ ಎಂದು ಆರೋಪಿಸಿದರು.
ಉಗ್ರರ ಸೆರೆಯಲ್ಲಿರುವವರ ಬಿಡುಗಡೆಗೆ ಕ್ರಮ : ಬಿರೇನ್ ಸಿಂಗ್
ಇAಫಾಲ್, ಸೆ. ೩೦: ಉಗ್ರರಿಂದ ಅಪಹರಣಕ್ಕೆ ಒಳಗಾಗಿರುವ ಇಬ್ಬರು ಯುವಕರ ಸುರಕ್ಷಿತ ಬಿಡುಗಡೆಗಾಗಿ ಸರ್ಕಾರವು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ಸಿಂಗ್ ಸೋಮವಾರ ಇಲ್ಲಿ ಹೇಳಿದರು. ಡಿಜಿಪಿ ಸ್ಥಳಕ್ಕೆ ತೆರಳಿದ್ದು, ಅಪಹರಣಕಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಕಾರಾತ್ಮಕ ಫಲಿತಾಂಶದ ನಿರೀಕ್ಷೆಯಿದೆ. ಉಗ್ರರು ಕೆಲವು ಬೇಡಿಕೆಗಳನ್ನಿಟ್ಟಿದ್ದಾರೆ. ಆದರೆ, ಸರ್ಕಾರವು ಯಾವುದೇ ಷರತ್ತುಗಳಿಲ್ಲದೆ ಯುವಕರ ಬಿಡುಗಡೆಗೆ ಪ್ರಯತ್ನಿಸುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಮೂರು ದಿನಗಳ ಹಿಂದೆ ಡೌಬಲ್ ಜಿಲ್ಲೆಯ ಮೂವರು ಯುವಕರನ್ನು ಕಾಂಗ್ಪೊಕ್ಷಿಯಲ್ಲಿ ಅಪಹರಿಸಲಾಗಿದೆ. ಈ ಪೈಕಿ ಒಬ್ಬನನ್ನು ಬಿಡುಗಡೆ ಮಾಡಿದ್ದು, ಇನ್ನಿಬ್ಬರನ್ನು ಸೆರೆಯಲ್ಲಿಟ್ಟುಕೊಂಡಿದ್ದಾರೆ.