ಶನಿವಾರಸAತೆ: ಪಟ್ಟಣದ ತ್ಯಾಗರಾಜ ಕಾಲೋನಿ ಹಾಗೂ ಗುಂಡೂರಾವ್ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಮಾತನಾಡಿ, “ಸುಪೋಷಿತ್ ಭಾರತ್, ಸಾಕ್ಷರ ಭಾರತ್ ಹಾಗೂ ಸಶಕ್ತ ಭಾರತ್’’ ಎಂಬ ಧ್ಯೇಯವಾಕ್ಯದಡಿ ಮಾಸಿಕ ಪೂರ್ತಿ ನಡೆಯುವ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಪೋಷಕರು ಹಾಗೂ ಗರ್ಭಿಣಿಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಕ್ಕಳ ತಪಾಸಣೆಯನ್ನು ಮಾಡಿದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶೋಕ್ ಮಾತನಾಡಿ, ಗರ್ಭಿಣಿಯರು, ತಾಯಂದಿರು ಪೌಷ್ಟಿಕ ಆಹಾರ ಉಪಯೋಗಿಸುವ ಬಗ್ಗೆ, ಅನಿಮಿಯಾ, ಅಪೌಷ್ಟಿಕತೆ ಬಗ್ಗೆ, ಚುಚ್ಚುಮದ್ದು ಕಾರ್ಯಕ್ರಮ ಹಾಗೂ ಕುಟುಂಬ ಕಲ್ಯಾಣ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸರಸ್ವತಿ, ಗ್ರಾಮ ಪಂಚಾಯಿತಿ ಸದಸ್ಯೆ ಎಸ್.ಪಿ. ಭಾಗ್ಯ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿಯರು, ಪೋಷಕರು ಹಾಜರಿದ್ದರು.

ಮಡಿಕೇರಿ

ಮಡಿಕೇರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಮಡಿಕೇರಿಯ ಆಜಾದ್ ನಗರ ಮತ್ತು ದಾಸವಾಳ ಬೀದಿ ಅಂಗನವಾಡಿ ಕೇಂದ್ರಗಳಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ ೦-೫ ವರ್ಷದ ಮಕ್ಕಳಿಗೆ ಹಾಗೂ ಗರ್ಭಿಣಿ, ಬಾಣಂತಿಯರಿಗೆ ಚುಚ್ಚುಮದ್ದು ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ನೆರವೇರಿತು.

ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಕ್ಕಳ ಪೋಷಕರಿಗೆ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು.

ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಬಗ್ಗೆ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ನೀಲಿಮ್ ತಿಳಿಸಿದರು. ಕಾರ್ಯಕ್ರಮದಲ್ಲಿ ಪಿಹೆಚ್‌ಸಿಓಗಳಾದ ಶಬ್ನಂ, ಅಶ್ವಿನಿ, ಆಶಾ, ಆರೋಗ್ಯ ಇಲಾಖೆ ಅಧಿಕಾರಿ ದೇವಿಪ್ರಸಾದ್, ಕಾರ್ಯಕರ್ತೆಯರುಗಳಾದ ಕವಿತಾ, ಮೈನಾ ಅಂಗನವಾಡಿ ಕಾರ್ಯಕರ್ತೆಯರಾದ ಸುಜಾತ, ಪಾರಿಜಾತ ಉಪಸ್ಥಿತರಿದ್ದರು.

ನಲ್ವತ್ತೇಕರೆ ಸಿದ್ದಾಪುರ: ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಭ್ಯತ್‌ಮಂಗಲ ಉಪಕೇಂದ್ರದ ವತಿಯಿಂದ ಪೋಷಣ್ ಅಭಿಯಾನ ಕಾರ್ಯಕ್ರಮ ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ನಲ್ವತ್ತೇಕರೆ ಶಾದಿಮಹಲ್ ಸಭಾಂಗಣದಲ್ಲಿ ನಡೆಯಿತು.

ಅಭಿಯಾನದ ಅಂಗವಾಗಿ ವ್ಯಾಪ್ತಿಯ ಗರ್ಭಿಣಿಯರು, ಬಾಣಂತಿಯರು, ಮಕ್ಕಳಿಗೆ ನೀಡಬೇಕಾದ ಪೌಷ್ಟಿಕ ಆಹಾರ, ಚುಚ್ಚುಮದ್ದು ನೀಡುವ ಕುರಿತು ಮಾಹಿತಿ ನೀಡಲಾಯಿತು. ಈ ಸಂದರ್ಭ ಆರೋಗ್ಯ ಸಹಾಯಕಿಯರಾದ ಗೀತ, ಜಿನ್ಶಾ, ಆಶಾ ಕಾರ್ಯಕರ್ತೆಯರಾದ ಸುಜಾತ, ಸುಂದರಿ, ಸೌಮ್ಯ, ಅಂಗನವಾಡಿ ಕಾರ್ಯಕರ್ತೆಯರಾದ ಭುವನೇಶ್ವರಿ, ರಮ್ಲಾ, ದಮಯಂತಿ ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ, ಸದಸ್ಯರಾದ ಸುಹದಾ ಸೇರಿದಂತೆ ವ್ಯಾಪ್ತಿಯ ಬಾಣಂತಿಯರು, ಗರ್ಭಿಣಿಯರು ಹಾಜರಿದ್ದರು. ಈ ಸಂದರ್ಭ ಪೌಷ್ಟಿಕ ಅಂಶಗಳಿರುವ ತರಕಾರಿ, ಹಣ್ಣುಗಳ ಪ್ರಾತ್ಯಕ್ಷಿಕತೆ ನಡೆಯಿತು.

ಚೆಯ್ಯಂಡಾಣೆ ಚೆಯ್ಯಂಡಾಣೆ: ನರಿಯಂದಡ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪೋಷಣ್ ಅಭಿಯಾನ, ಅರಿವು ಹಾಗೂ ಜಾಗೃತಿ ಕಾರ್ಯಕ್ರಮ ನಡೆಯಿತು.

ನರಿಯಂದಡ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಉದ್ಘಾಟಿಸಿದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಪೋಷಣ್ ಅಭಿಯಾನದ ಕುರಿತು ಮಾತನಾಡಿದರು. ಚೆಯ್ಯಂಡಾಣೆ ಆರೋಗ್ಯ ಕೇಂದ್ರದ ಹಿರಿಯ ಸಹಾಯಕಿ ಕನಕಾವತಿ ಪೌಷ್ಟಿಕಾಂಶದ ಕುರಿತು ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ತಪಾಸಣೆ ನಡೆಯಿತು.

ಈ ಸಂದರ್ಭ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪುಷ್ಪ, ಅಂಗನವಾಡಿ ಕಾರ್ಯಕರ್ತೆ ತಾರಾಮಣಿ, ಆಶಾಕಾರ್ಯಕರ್ತೆ ರಾಜೇಶ್ವರಿ, ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ವಸಂತಿ ಮತ್ತಿತರರು ಉಪಸ್ಥಿತರಿದ್ದರು.