ಮಡಿಕೇರಿ, ಸೆ. ೨೯: ಪತ್ರಕರ್ತ ಅನಿಲ್ ಎಚ್.ಟಿ. ಬರೆದಿರುವ ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾದ ಇತಿಹಾಸ ಹಾಗೂ ಮಾಹಿತಿಗಳನ್ನು ಒಳಗೊಂಡ ಮಡಿಕೇರಿ ದಸರಾ ಜನೋತ್ಸವ ಪುಸ್ತಕ ಇಂದು ಲೋಕಾರ್ಪಣೆ ಗೊಂಡಿತು.
ನಗರದ ರೆಡ್ಬ್ರಿಕ್ಸ್ ಇನ್ನ ಸತ್ಕಾರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಮಡಿಕೇರಿ ನಗರ ದಸರಾ ಸಮಿತಿಯ ಅಧ್ಯಕ್ಷರೂ ಆಗಿರುವ ವೆಂಕಟ್ರಾಜಾ ಅವರು ಪುಸ್ತಕವನ್ನು ಲೋಕಾರ್ಪಣೆ ಗೊಳಿಸಿದರು. ಬಳಿಕ ಮಾತನಾಡಿದ ಅವರು, ದಸರಾದಂತಹ ಐತಿಹಾಸಿಕ ಉತ್ಸವಗಳನ್ನು ದಾಖಲೀಕರಣ ಗೊಳಿಸುವ ಕಾರ್ಯ ನಡೆಯಬೇಕು. ಆ ಮೂಲಕ ಮುಂದಿನ ಪೀಳಿಗೆಗೂ ಉತ್ಸವಗಳ ಐತಿಹಾಸಿಕ ಹಿನ್ನೆಲೆ ಹಾಗೂ ಮಹತ್ವದ ಬಗ್ಗೆ ಪರಿಚಯಿಸಲು ಸಾಧ್ಯವಾಗುತ್ತದೆ.
ಈ ನಿಟ್ಟಿನಲ್ಲಿ ಮಡಿಕೇರಿ ದಸರಾ ಜನೋತ್ಸವ ಪುಸ್ತಕ ಹೊರತಂದಿರು ವುದು ಶ್ಲಾಘನೀಯ. ದಸರಾ ಸಮಿತಿಯಿಂದಲೂ ದಸರಾ ಉತ್ಸವದ ದಾಖಲೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದರು.
ಅತಿಥಿಯಾಗಿದ್ದ ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಮಾತನಾಡಿ, ಮಡಿಕೇರಿ ದಸರಾ ವೈಭವಯುತವಾಗಿ ನಡೆಯುತ್ತಾ ಬಂದಿದ್ದು, ಇದು ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ. ದಸರಾದಲ್ಲಿ ನಮ್ಮ ಪದ್ಧತಿ ಪರಂಪರೆಗೆ ಪೂರಕವಾದ ಕಾರ್ಯಕ್ರಮಗಳಿಗೆ ಆದ್ಯತೆ ಸಿಗುವಂತಾಗಬೇಕು. ಸರ್ಕಾರ ಕೂಡ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಹೇಳಿದರು. ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಚರಿತ್ರೆಯನ್ನು ಜನರ ಮುಂದಿಡುವ ಇಂತಹ ಕಾರ್ಯಗಳು ಶ್ಲಾಘನೀಯ ಎಂದರಲ್ಲದೆ, ಮೈಸೂರು ದಸರಾಕ್ಕಿಂತ ಅದ್ದೂರಿ ಯಾಗಿ ನಡೆಯುವ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ಸರ್ಕಾರ ರೂ. ೨ ಕೋಟಿ ಅನುದಾನ ನೀಡುವಂತಾಗಬೇಕು ಎಂದು ನುಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ದಸರಾ ಉತ್ಸವವನ್ನು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಆಚರಿಸುವಂತಾಗಬೇಕೆAದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಮಾತನಾಡಿ, ದಸರಾ ಉತ್ಸವ ಕುರಿತಂತೆ ಪುಸ್ತಕ ಹೊರತಂದಿರುವುದು ಉತ್ತಮ ಕಾರ್ಯ ಎಂದು ಅಭಿಪ್ರಾಯಿಸಿದರು. ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಮಡಿಕೇರಿ ದಸರಾ ಸಂಬAಧ ಅಗತ್ಯ ತಯಾರಿಗಳು ನಡೆಯುತ್ತಿದ್ದು, ನವರಾತ್ರಿ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಜನತೆ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ದಸರಾ ಸಮಿತಿ ಗೌರವಾಧ್ಯಕ್ಷ ಜಿ. ಚಿದ್ವಿಲಾಸ್ ಮಾತನಾಡಿ, ಮಡಿಕೇರಿ ದಸರಾ ಜನೋತ್ಸವ ಪುಸ್ತಕ ಉತ್ತಮ ಪರಿಕಲ್ಪನೆಯ ಸಂಗ್ರಹ ಯೋಗ್ಯವಾದ ಕೃತಿಯಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಪುಸ್ತಕದ ಲೇಖಕ ಅನಿಲ್ ಎಚ್.ಟಿ. ಪ್ರಾಸ್ತಾವಿಕವಾಗಿ ಮಾತನಾಡಿ, ಮಡಿಕೇರಿ ದಸರಾ ಉತ್ಸವವನ್ನು ಹೆಚ್ಚು ಪ್ರಚಾರಗೊಳಿಸುವ ಕಾರ್ಯ ನಡೆಯಬೇಕಿದೆ. ಆ ಮುಖಾಂತರ ದಸರಾ ಉತ್ಸವಕ್ಕೆ ಸರ್ಕಾರದ ಮಟ್ಟದಲ್ಲೂ ಸೂಕ್ತ ಪರಿಗಣನೆ ಸಿಗುವಂತಾಗಬೇಕು ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ದಸರಾಕ್ಕೆ ನವರೂಪುರೇಷೆ ನೀಡಿದ ಶಿವರಾಮ ಶೆಟ್ಟಿ ದಂಪತಿಯನ್ನು ಹಾಗೂ ದಿ. ಭೀಮಾಸಿಂಗ್ ಅವರ ಪುತ್ರಿ ಶಾರದಾಭಾಯಿ ಅವರ ಪರವಾಗಿ ಅವರ ಮಕ್ಕಳಾದ ರವಿ ಹಾಗೂ ವಾಸಂತಿ ಇವರುಗಳನ್ನು ಮತ್ತು ಮಡಿಕೇರಿ ದಸರಾ ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭೇಟಿ ನೀಡಿದ್ದ ಎಂ.ಪಿ. ಮುತ್ತಪ್ಪ ಇವರು ಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ದಸರಾ ಸಮಿತಿ ಖಜಾಂಚಿ ಅರುಣ್ ಶೆಟ್ಟಿ, ದಶಮಂಟಪ ಸಮಿತಿ ಅಧ್ಯಕ್ಷ ಜಗದೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುನೀರ್ ಅಹ್ಮದ್ ನಿರೂಪಿಸಿ, ಚಿತ್ರಾ ನಂಜಪ್ಪ, ವಂದನಾ ಪೊನ್ನಪ್ಪ, ಸಂಧ್ಯಾ ಚಿದ್ವಿಲಾಸ್ ಪ್ರಾರ್ಥಿಸಿದರು. ಅನಿಲ್ ಸ್ವಾಗತಿಸಿ, ವಂದಿಸಿದರು.