ಐಗೂರು, ಸೆ. ೩೦: ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವಕನ ಕುಟುಂಬಕ್ಕೆ ಶಾಸಕ ಮಂತರ್ ಗೌಡ ಸಾಂತ್ವನ ಹೇಳಿದರು. ಐಗೂರು ಗ್ರಾಂ. ಪಂ. ವ್ಯಾಪ್ತಿಯ ವಿಜಯನಗರ ನಿವಾಸಿ ಮಂಜುನಾಥ ಹಾಗೂ ಸುಜಾತ ದಂಪತಿ ಪುತ್ರ ಕುಶಾಲನಗರದ ಎಂ.ಜಿ.ಎA. ಕಾಲೇಜಿನ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಹೇಮಂತ್ (೧೯) ಸ್ನಾನ ಮಾಡುವ ಸಲುವಾಗಿ ಬಿಸಿನೀರು ಕಾಯಿಸಿಕೊಳ್ಳಲು ಪಾತ್ರೆಯೊಂದರಲ್ಲಿ ನೀರು ತುಂಬಿ ಪಾತ್ರೆಯೊಳಗೆ ಹಾಕಿದ್ದ ವಿದ್ಯುತ್ ಹೀಟರ್ ಸ್ಪರ್ಶಿಸಿ ದುರ್ಮರಣಕ್ಕೀಡಾಗಿರುವ ದುರ್ಘಟನೆಯೊಂದು ಐಗೂರಿನ ವಿಜಯನಗರದ ಅವರ ನಿವಾಸದಲ್ಲಿ ತಾ. ೨೫ ರಂದು ನಡೆದಿತ್ತು.
ಕ್ಷೇತ್ರದ ಶಾಸಕ ಡಾ. ಮಂತರ್ಗೌಡ ಐಗೂರಿನ ಮೃತ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಮೃತನ ಪೋಷಕರಿಗೆ ಸಾಂತ್ವನ ಹೇಳಿದರು. ಹೇಮಂತ್ ಸಹೋದರಿ ವಿದ್ಯಾಭ್ಯಾಸಕ್ಕೆ ನೆರವು ನೀಡುವುದರ ಜೊತೆಗೆ ಕುಟುಂಬಕ್ಕೆ ಸ್ವಂತ ಭೂಮಿ ಇದ್ದರೆ ಮನೆ ನಿರ್ಮಾಣಕ್ಕೆ ಸಹಾಯ ಮಾಡುವುದಾಗಿ ಶಾಸಕರು ಭರವಸೆ ನೀಡಿದರು.
ಈ ಸಂದರ್ಭ ಐಗೂರು ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಯೋಗೇಶ್, ಸೋಮವಾರಪೇಟೆ ತಾಲೂಕು ಕೆಡಿಪಿ ಸದಸ್ಯರುಗಳಾದ ಸಬಿತಾ ಚೆನ್ನಕೇಶವ, ಗಣೇಶ್, ದಿನೇಶ್, ಶೋಭಾ ಹೊನ್ನಪ್ಪ ಇದ್ದರು.