ಸಿದ್ದಾಪುರ, ಸೆ. ೨೮: ಜಿಲ್ಲೆಯಲ್ಲಿ ಪರಿಸರ ಪೂರಕವಾದ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕೆಂದು ಕೊಡಗು ಜಿಲ್ಲಾ ಹೊಟೇಲ್, ರೆಸಾರ್ಟ್ ಹಾಗೂ ಉಪಹಾರ ಗೃಹ ಸಂಘದ ಗೌರವಾಧ್ಯಕ್ಷ ನಾಗೇಂದ್ರ ಪ್ರಸಾದ್ ಸಲಹೆ ನೀಡಿದರು.

ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಿದ್ದಾಪುರದ ಇವಾಲ್ವ್ ಬ್ಯಾಕ್ ರೆಸಾರ್ಟ್ನಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಪ್ರವಾಸಿಗರಿಗೆ ನಮ್ಮ ನಾಡಿನ ಆಚಾರ ವಿಚಾರ, ಸಂಸ್ಕೃತಿ ಹಾಗೂ ಆಹಾರ ಪದ್ಧತಿಯನ್ನು ಪರಿಚಯಿಸುವಂತಾಗಬೇಕು. ಧಾರ್ಮಿಕ ಸ್ಥಳಗಳಲ್ಲಿ ಪ್ರವಾಸೋದ್ಯಮಕ್ಕೆ ಅನುವು ನೀಡಬಾರದು. ಜಿಲ್ಲೆಯು ಪರಿಸರ ಪ್ರವಾಸೋದ್ಯಮದಲ್ಲಿ ೭ ನೇ ಸ್ಥಾನದಲ್ಲಿದ್ದು, ಜಿಲ್ಲೆಯ ಸುಮಾರು ೧.೨೫ ಲಕ್ಷ ಮಂದಿ ಪ್ರವಾಸೋದ್ಯಮವನ್ನು ಅವಲಂಬಿಸಿದ್ದಾರೆ.

ಕಂಟೆAಟ್ ಕ್ರಿಯೇಟರ್ ಹಾಗೂ ಎವರ್ ಗ್ರೀನ್ ಕೌಂಟಿ ಮಾಲೀಕರಾದ ಭಜನ್ ಬೋಪಣ್ಣ ಮಾತನಾಡಿ, ಪ್ರವಾಸೋದ್ಯಮದಿಂದಾಗಿ ಜಿಲ್ಲೆಯ ಎಲ್ಲಾ ರಂಗದ ಜನರು ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಪರಿಸರಕ್ಕೆ ಹಾನಿಯಾಗದಂತೆ ಪ್ರವಾಸೋದ್ಯಮವನ್ನು ನಡೆಸಬೇಕು. ಪ್ರವಾಸಿ ತಾಣಗಳಲ್ಲಿ ಭದ್ರತೆ ಹೆಚ್ಚಾಗಬೇಕು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಜಿಲ್ಲೆಗೆ ಕಳಂಕ ಉಂಟಾಗದ ರೀತಿಯಲ್ಲಿ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು ಎಂದರು.

ಕೊಡಗು ಎಸ್.ಎನ್.ಡಿ.ಪಿ ಅಧ್ಯಕ್ಷರಾದ ವಿ.ಕೆ. ಲೊಕೇಶ್ ಮಾತನಾಡಿ, ಜಿಲ್ಲೆಯ ಪರಿಸರವನ್ನು ಉಳಿಸಿಕೊಂಡು, ಪ್ರವಾಸಿಗರಿಗೆ ರಕ್ಷಣೆ ಹಾಗೂ ಸೇವೆಯನ್ನು ನೀಡಬೇಕು. ಜಿಲ್ಲೆಯಿಂದ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್ ಸವಿತಾ ರೈ, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಇವಾಲ್ವ್ ಬ್ಯಾಕ್ ರೆಸಾರ್ಟ್ನ ಪ್ರಧಾನ ವ್ಯವಸ್ಥಾಪಕ ಥೋಮಸ್ ಪೌಲ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ವಹಿಸಿದ್ದರು. ಆರ್.ಸುಬ್ರಮಣಿ ನಿರೂಪಿಸಿ, ಎ.ಎಸ್ ಮುಸ್ತಫ ಸ್ವಾಗತಿಸಿ, ಹೇಮಂತ್ ವಂದಿಸಿದರು.