ಲೆಬನನ್ ದೇಶದ ಬೈರುತ್ನಲ್ಲಿ ನಿನ್ನೆ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆಯ ನಾಯಕ ಹಸನ್ ನಸ್ರಲ್ಲಾ ಹತ್ಯೆಯಾಗಿರುವುದಾಗಿ ಇಸ್ರೇಲಿ ಮಿಲಿಟರಿ ಶನಿವಾರ ಘೋಷಿಸಿಕೊಂಡಿದೆ. ಹಿಜ್ಬುಲ್ಲಾ ಸಂಘಟನೆಯು ಕೂಡ ಈ ಬಗ್ಗೆ ದೃಢೀಕರಿಸಿದೆ. ತಾ.೨೭ ರಂದು ಇಸ್ರೇಲ್ ನಡೆಸಿದ ವಾಯು ದಾಳಿಗೆ ಲೆಬನನ್ನಿನ ಬೈರುತ್ನ ದಕ್ಷಿಣದ ದಹೀಹ್ನಲ್ಲಿ ಆರು ವಸತಿ ಕಟ್ಟಡಗಳನ್ನು ನೆಲಸಮಗೊಳಿಸಲಾಗಿತ್ತು. ಒಂದು ಕಟ್ಟಡದಲ್ಲಿ ಹಿಜ್ಬುಲಾ ಮುಖ್ಯಸ್ಥ ನಸ್ರಲ್ಲಾ ಇದ್ದುದಾಗಿ ಅಂದಾಜಿಸಲಾಗಿತ್ತು. ಈ ಬಗ್ಗೆ ತಾ.೨೮ ರಂದು ಅಧಿಕೃತ ಮಾಹಿತಿ ದೊರೆತಿದ್ದು ನಸ್ರಲ್ಲಾ ಸೇರಿದಂತೆ ಕನಿಷ್ಟ ಆರು ಮಂದಿ ಮೃತರಾಗಿರುವುದು ದೃಢವಾಗಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ನಸ್ರಲ್ಲಾ ಮುಂದಾಳತ್ವದಲ್ಲಿ ಹಿಜ್ಬುಲ್ಲಾ ಕಾರ್ಯಚರಿಸುತ್ತಿತ್ತು.
ಕೆಲ ದಿನಗಳ ಹಿಂದಷ್ಟೆ ಲೆಬನನ್ನಿನಲ್ಲಿದ್ದ ಹಿಜ್ಬುಲ್ಲಾ ಸಂಘಟನೆಯ ಸದಸ್ಯರು ಬಳಸುತ್ತಿದ್ದ ಪೇಜರ್ಗಳು ಸ್ಫೋಟಗೊಂಡ ಪರಿಣಾಮ ೩೦ ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದಲ್ಲದೆ ೩,೦೦೦ ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಪೇಜರ್ ಸ್ಫೋಟಕ್ಕೆ ಇಸ್ರೇಲ್ ಕಾರಣ ಎಂದು ಹೇಳಲಾಗಿತ್ತಾದರೂ ಈ ಬಗ್ಗೆ ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದಾಗ್ಯೂ ಇಸ್ರೇಲ್ ಅನ್ನು ಗುರಿಯಾಗಿಸಿ ಹಿಜ್ಬುಲ್ಲಾ ಇಸ್ರೇಲ್ ಮೇಲೆ ವಾಯು ದಾಳಿ ನಡೆಸಿತು. ಅತ್ಯಾಧುನಿಕ ಭದ್ರತಾ ತಂತ್ರಜ್ಞಾನ ಬಳಸುತ್ತಿರುವ ಇಸ್ರೇಲ್ ಹಿಜ್ಬುಲ್ಲಾ ಸಿಡಿಸಿದ ಎಲ್ಲ ರಾಕೆಟ್ಗಳನ್ನು ಸುಲಭವಾಗಿ ನಿಯಂತ್ರಿಸಿತ್ತು. ನಂತರ ಹಿಜ್ಬುಲ್ಲಾವನ್ನು ಗುರಿಯಾಗಿಸಿ ಲೆಬನನ್ನಿನ ಮೇಲೆ ಇಸ್ರೇಲ್ ದಾಳಿ ನಡೆಸಿ ೫೦೦ ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿತ್ತು. ಇದರ ಮುಂದುವರಿದ ಭಾಗವಾಗಿ ತಾ.೨೭ ರಂದು ನಡೆದ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಕೂಡ ಹತ್ಯೆಯಾಗಿರುವುದು ದೃಢವಾಗಿದೆ.