ಮಡಿಕೇರಿ, ಸೆ. ೨೭: ಇತ್ತೀಚೆಗೆ ಗೋಣಿಕೊಪ್ಪ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾರತೀಯ ಸೇನೆಗೆ ಸೇರಲು ಎನ್.ಡಿ.ಎ, ಸಿ.ಡಿ.ಎಸ್ ಹಾಗೂ ಎಸ್.ಎಸ್.ಬಿ.ಯ ಕುರಿತು ಕಾರ್ಯಾಗಾರ ನಡೆಯಿತು. ಜೈ ಜವಾನ್ ಡಿಫೆನ್ಸ್ ಟ್ರೆöÊನಿಂಗ್ ಮತ್ತು ಕೋಚಿಂಗ್ ಅಕಾಡೆಮಿಯ ನಿರ್ದೇಶಕ ಲವನ್ ಮಾದಪ್ಪ ಮಾತನಾಡಿ, ಕೊಡಗಿನಿಂದ ಭಾರತೀಯ ಸೇನಾಪಡೆಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರು ಜನಿಸಿದ ಜಿಲ್ಲೆಯಿಂದ ಹೆಚ್ಚಿನ ಯುವಕ ಯುವತಿಯರನ್ನು ಭಾರತೀಯ ಸೇನೆಗೆ ಸೇರಿಸುವುದೇ ನಮ್ಮ ಅಕಾಡೆಮಿಯ ಉದ್ದೇಶವೆಂದು ತಿಳಿಸಿದರು. ಇಂದಿನ ಯುವಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಪೋಷಕರು ಹಾಗೂ ಗುರುಗಳ ಮಾರ್ಗದರ್ಶನದಿಂದ ಎನ್.ಡಿ.ಎ, ಸಿ.ಡಿ.ಎಸ್ ಹಾಗೂ ಎಸ್.ಎಸ್.ಬಿಯ ಮುಖಾಂತರ ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಂಡು ಭಾರತೀಯ ಸೇನೆಗೆ ಸೇರ್ಪಡೆಯಾಗಬೇಕೆಂದು ಕರೆ ನೀಡಿದರು. ದ್ವಿತೀಯ ಪಿಯುಸಿ ನಂತರ ಎನ್.ಡಿ.ಎ ಸೇರಲು, ಬೇಕಾಗುವ ಅರ್ಹತೆ ಮತ್ತು ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಪದವಿ ನಂತರ ಸಿ.ಡಿ.ಎಸ್ ಹಾಗೂ ಎಸ್.ಎಸ್.ಬಿ.ಗೆ ಸೇರುವ ಬಗೆ ಜೈ ಜವಾನ್ ಟ್ರೆöÊನಿಂಗ್ ಮತ್ತು ಕೋಚಿಂಗ್ ಅಕಾಡೆಮಿಯ ಉಪನಿರ್ದೇಶಕರಾದ ಸೋಮಯ್ಯ ಕೆ.ಕೆ ಅವರು ಮಾಹಿತಿ ನೀಡಿದರು. ವಿಜ್ಞಾನ ಹಾಗೂ ವಾಣಿಜ್ಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾಲೇಜಿನ ಪ್ರಾಂಶುಪಾಲ ಎಸ್.ಎಸ್ ಮಾದಯ್ಯ ಅವರ ಅಧÀ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲೆ ಎಂ.ಕೆ ಪದ್ಮ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಚೇತನ್ ಚಿಣ್ಣಪ್ಪ, ಉಪನ್ಯಾಸಕರಾದ ಎಂ.ಬಿ.ಪೂವಮ್ಮ, ಜೆಸಿಂತಾ, ಸುನೀತಾ, ಜಶ್ಮಿ ಹಾಜರಿದ್ದರು. ವಿದ್ಯಾರ್ಥಿ ವಿಪಿನ್ ಕಾರ್ಯಕ್ರಮವನ್ನು ನಿರೂಪಿಸಿದರು.