ಮಡಿಕೇರಿ, ಸೆ. ೨೭: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಮಡಿಕೇರಿ ಹಾಗೂ ಕುಶಾಲನಗರ ಸುತ್ತಮುತ್ತಲಿನ ಪ್ರವಾಸಿ ತಾಣಗಳಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸ್ವಚ್ಛತಾ ಹೀ ಸೇವಾ-೨೦೨೪ರಡಿಯಲ್ಲಿ ‘ಸ್ವಭಾವ ಸ್ವಚ್ಛತೆ- ಸಂಸ್ಕಾರ ಸ್ವಚ್ಛತೆ’ ಘೋಷವಾಕ್ಯದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಯಿತು. ಜೊತೆಗೆ ಜಾಥಾ ನಡೆಸಿ ‘ಕಸ ಮುಕ್ತ ಪ್ರವಾಸೋದ್ಯಮ’À ಕುರಿತು ಜಾಗೃತಿ ಮೂಡಿಸಲಾಯಿತು.

ಮಡಿಕೇರಿಯಲ್ಲಿ

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಡಿಕೇರಿ ನಗರಸಭೆ, ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಇಲಾಖೆ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಹೋಂ-ಸ್ಟೇ ಆಸೋಸಿಯೇಷನ್, ಹೊಟೇಲ್ ಆಸೋಸಿಯೇಷನ್, ಟೂರ್, ಟ್ರಾವೆಲ್ಸ್ ಆಸೋಸಿಯೇಷನ್, ಎಫ್.ಎಂ.ಸಿ ಕಾಲೇಜು ಪ್ರವಾಸೋದ್ಯಮ ವಿಭಾಗ, ಮಡಿಕೇರಿ ಸಂತ ಮೈಕಲ್ ಶಾಲೆ, ಸಂತ ಜೋಸೆಫ್ ಶಾಲೆ ಹಾಗೂ ಪ್ರವಾಸೋದ್ಯಮ ಪಾಲುದಾರರ ಸಹಯೋಗದಲ್ಲಿ ಮಡಿಕೇರಿ ಇಂದಿರಾ ಗಾಂಧಿ ವೃತ್ತದಿಂದ ಗ್ರೇಟರ್ ರಾಜಾಸೀಟ್ ಪ್ರವಾಸಿ ತಾಣದವರೆಗೆ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿಯಲ್ಲಿ ಸ್ವಚ್ಛತಾ ಜಾಥಾ ನಡೆಸಲಾಯಿತು.

ರಾಜಾಸೀಟ್ ಉದ್ಯಾನವನದಲ್ಲಿ “ನನ್ನ ಪ್ರತಿಜ್ಞೆ ಶೂನ್ಯ ತ್ಯಾಜ್ಯ ಪ್ರವಾಸ” ಎಂಬ ಪೋಟೋ ಫ್ರೇಮ್ ಅನ್ನು ಅನಾವರಣಗೊಳಿಸುವ ಮೂಲಕ ಪ್ರವಾಸಿಗರಲ್ಲಿ ಕಸ ಮುಕ್ತ ಪ್ರವಾಸೋದ್ಯಮ ಬಗ್ಗೆ ಜಾಗೃತಿ ಮೂಡಿಸಲಾಯಿತು. ನಗರದ ಗದ್ದುಗೆಯಲ್ಲಿಯೂ ಶ್ರಮದಾನ ನಡೆಸಲಾಯಿತು.

ಕುಶಾಲನಗರ

ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಕೊಡಗು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ದುಬಾರೆ ರಿವರ್ ರ‍್ಯಾಫ್ಟಿಂಗ್ ಅಸೋಸಿ ಯೇಷನ್ ಹಾಗೂ ನಂಜರಾಯ ಪಟ್ಟಣ ಗ್ರಾಮ ಪಂಚಾಯಿತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂಜರಾಯಪಟ್ಟಣ ಹಾಗೂ ಪ್ರವಾಸೋದ್ಯಮ ಪಾಲುದಾರರ ಸಹಯೋಗದಲ್ಲಿ ದುಬಾರೆ ಪ್ರವಾಸಿ ತಾಣದಲ್ಲಿ ಸ್ವಚ್ಛತಾ ಈ ಸೇವಾ ಕಾರ್ಯಕ್ರಮದಡಿಯಲ್ಲಿ ಸ್ವಚ್ಛತಾ ಜಾಥಾವನ್ನು ಕೈಗೊಂಡು ಪ್ರವಾಸಿಗರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ಶ್ರಮದಾನ ನಡೆಸಿ, ಪ್ರವಾಸಿ ತಾಣವನ್ನು ಶುಚಿ ಮಾಡಲಾಯಿತು.