ಪೊನ್ನಂಪೇಟೆ, ಸೆ. ೨೭: ಸಾಮಾನ್ಯವಾಗಿ ಹಾಲನ್ನು ಯಾರೂ ಕಳವು ಮಾಡುವುದಿಲ್ಲ ಎಂಬ ನಂಬಿಕೆಯೊAದಿಗೆ, ಹಾಲು ಮಾರಾಟ ಮಾಡುವ ಅಂಗಡಿಗಳ ಮುಂದೆ, ಹಾಲಿನ ವ್ಯಾನಿನವರು ಹಾಲಿನ ಪ್ಯಾಕೆಟ್ ತುಂಬಿದ ಕ್ರೇಟ್‌ಗಳನ್ನು ಇಳಿಸಿ ತೆರಳುತ್ತಾರೆ. ಆದರೆ ಹಾಲನ್ನು ಕೂಡ ಕಳವು ಮಾಡಿ ಆ ನಂಬಿಕೆಯನ್ನು ಸುಳ್ಳಾಗಿಸಿರುವ ಘಟನೆ ಪೊನ್ನಂಪೇಟೆಯಲ್ಲಿ ನಡೆದಿದೆ.
ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮ ಸಮೀಪವಿರುವ ಗ್ರೀನ್ ಲ್ಯಾಂಡ್ ಪ್ರಾವಿಷನ್ ಸ್ಟೋರ್ ಮುಂಭಾಗದಲ್ಲಿ ಇರಿಸಿದ್ದ ನಂದಿನಿ ಹಾಲಿನ ಕ್ರೇಟ್‌ಗಳಲ್ಲಿ ಇಟ್ಟಿದ್ದ ಹಾಲನ್ನು ತಾ. ೨೬ ರಂದು ರಾತ್ರಿ ೧.೨೦ರ ಸಮಯದಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಸ್ಕೂಟಿಯಲ್ಲಿ ಬಂದು ಕಳವು ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಪರಿಚಿತ ಯುವಕರು ಸುಮಾರು ೧೦ಲೀಟರ್ ನಷ್ಟು ಹಾಲನ್ನು ಕಳವು ಮಾಡಿ ತೆರಳಿದ್ದಾರೆ. ರಾತ್ರಿ ಸಮಯದಲ್ಲಿ ಜಾಲಿ ರೈಡ್ ಬಂದಿದ್ದ ಪುಂಡರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದ್ದು, ಅಂಗಡಿ ಮಾಲೀಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲ.
ಆದರೂ ಪೊಲೀಸರು ಆ ಯುವಕರ ಗುರುತು ಪತ್ತೆ ಹಚ್ಚಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಯುವಕರು ತಮ್ಮ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದಾರೆ.