ಸಿದ್ದಾಪುರ, ಸೆ. ೨೬: ನೆಲ್ಲಿಹುದಿಕೇರಿಯಲ್ಲಿರುವ ಅಭ್ಯತ್ ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಸಹಕಾರ ಸಂಘದ ಅಧ್ಯಕ್ಷ. ವಿ.ಕೆ. ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಲೋಕೇಶ್ ಅವರು ಅಭ್ಯತ್ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಗತಿಯತ್ತ ದಾಪುಗಾಲು ಇಡುತ್ತಿದೆ ಎಂದರು. ಸಂಘದ ಸದಸ್ಯರುಗಳಿಗೆ ವಿವಿಧ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಂಘದ ವತಿಯಿಂದ ಖರೀದಿಸಲಾದ ಜಾಗದಲ್ಲಿ ಮುಂದಿನ ದಿನಗಳಲ್ಲಿ ನೂತನವಾಗಿ ಕಟ್ಟಡಗಳನ್ನು ನಿರ್ಮಿಸಲಾಗುವು ದೆಂದು ಹೇಳಿದರು. ಇದಲ್ಲದೆ ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಯೋಜನೆಗಳನ್ನು ರೂಪಿಸುವ ಮೂಲಕ ಸಂಘದ ಏಳಿಗೆಗಾಗಿ ಶ್ರಮಿಸುವ ಭರವಸೆಯನ್ನು ನೀಡಿದರು.
ಸಂಘದ ವತಿಯಿಂದ ಸಂಘದ ಸದಸ್ಯರುಗಳ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಅವರುಗಳನ್ನು ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು. ಸಂಘದ ನಿರ್ದೇಶಕರ ಹಾಗೂ ಮಾಜಿ ಅಧ್ಯಕ್ಷರುಗಳ, ಸದಸ್ಯರುಗಳ ಸಲಹೆ ಸೂಚನೆಗಳನ್ನು ಪಡೆದುಕೊಂಡು ಸಂಘವನ್ನು ಮತ್ತಷ್ಟು ಉತ್ತಮ ಸಾಧನೆ ಮಾಡಲು ಗುರಿ ಹೊಂದಲಾಗಿದೆ ಎಂದು ಲೋಕೇಶ್ ಅವರು ಸಭೆಯಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭ ಅಭ್ಯತ್ಮಂಗಲ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರುಗಳಾದ ಹಳಗದ್ದೆ ಮಾದಪ್ಪ, ಕೆ.ಬಿ. ಶಿವಪ್ಪ, ಪಿ.ಡಿ. ಚೀಯಣ್ಣ, ಎನ್.ಎಂ. ಮೇದಪ್ಪ, ಕೆ.ಎಂ. ಜಯಕುಮಾರ್, ವಸಂತ ಕುಮಾರ್ ಹೊಸಮನೆ, ಬ್ಯಾಂಕಿನಲ್ಲಿ ಸುದೀರ್ಘಕಾಲ ಪಿಗ್ಮಿ ಸಂಗ್ರಹಗಾರರಾಗಿ ಸೇವೆ ಸಲ್ಲಿಸಿದ ಜಯರಾಮ್ ಹಾಗೂ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಸೇವೆ ಮಾಡಿದ ಮಣಿ ಮೊಹಮ್ಮದ್ ಅವರನ್ನು ಹಾಗೂ ಹತ್ತನೇ ತರಗತಿ ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ತೋಟಂಬೈಲು ಪ್ರಸನ್ನ, ನಿರ್ದೇಶಕರು ಗಳಾದ ಟಿ.ಸಿ. ಅಶೋಕ, ಹಳಗದ್ದೆ ಭಾನುಪ್ರಕಾಶ್, ಪಿ.ಸಿ. ಆಚ್ಚಯ್ಯ, ಕೆ.ಎಂ. ಪ್ರಸನ್ನ, ಎಂ. ಧರ್ಮಲಿಂಗ, ಡಿ.ಎಂ. ತೇಜಸ್, ಕೆ.ಜೆ. ಸುಪ್ರೀಂ, ವಿ.ಕೆ. ಸುನಿಲ್ ಕುಮಾರ್, ಆರ್. ಸುಧರ್ಮ, ಎಂ.ಎನ್. ಹರಿಣಿ, ಆರ್. ಪ್ರಮೀಳ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪುಟ್ಟಿಚ್ಚಂಡ ಕಾರ್ಯಪ್ಪ ಹಾಜರಿದ್ದರು.