ಶನಿವಾರಸAತೆ, ಸೆ. ೨೬: ಕಾಜೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರ ಸಹಕಾರದಿಂದ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷೆ ಹೆಚ್.ಡಿ. ಕಾವ್ಯಾ ವಸಂತ್ ಹೇಳಿದರು.

ಸಮೀಪದ ಕಾಜೂರು ಗ್ರಾಮದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಾಜೂರು ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎರಡು ವರ್ಷಗಳ ಹಿಂದೆ ಕೇವಲ ೨೫ ಲೀಟರ್ ಹಾಲಿನಿಂದ ಪ್ರಾರಂಭವಾಗಿ ಇಂದು ೨೪೦ ಲೀಟರ್ ಹಾಲಿನವರೆಗೆ ತಲುಪಿ ಅಭಿವೃದ್ಧಿ ಹೋದುತ್ತಿದೆ. ಸಂಘಕ್ಕೆ ಹಾಲು ತರುವ ರೈತರ ವ್ಯಾಪ್ತಿಯು ಕಾಜೂರು, ದುಂಡಳ್ಳಿ, ಚಿಕ್ಕಕೊಳತ್ತೂರು, ದೊಡ್ಡಕೊಳತ್ತೂರು, ಕೂಜಗೇರಿ ಗ್ರಾಮಗಳಿಗೆ ವಿಸ್ತರಿಸಿದ್ದು ಸಂಘದ ಉತ್ತಮ ಆಡಳಿತ, ಪಾರದರ್ಶಕತೆ ಹಾಗೂ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಮುಂದೆಯೂ ಸರ್ವ ಸದಸ್ಯರ ಸಹಕಾರ ದೊಂದಿಗೆ ಗುಣಮಟ್ಟವನ್ನು ಉಳಿಸಿಕೊಂಡು ಹಾಸನ ಹಾಲು ಒಕ್ಕೂಟದ ಮಾರ್ಗದರ್ಶನದಲ್ಲಿ ಸಂಘವನ್ನು ಇನ್ನೂ ಉತ್ತಮವಾಗಿ ಬೆಳೆಸುತ್ತೇವೆ ಎಂದರು.

ಮಹಾಸಭೆಯ ಲೆಕ್ಕಪತ್ರ ಮಂಡನೆ ಮಾಡಿ ಅನುಮೋದಿಸಿದ ಮುಖ್ಯ ಅತಿಥಿ ಹಾಸನ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ವೇಣುಗೋಪಾಲ್ ಮಾತನಾಡಿ, ೨ ವರ್ಷಕ್ಕೊಮ್ಮೆ ಸಂಘದ ಲೆಕ್ಕ ಪರಿಶೋಧನೆ ಮಾಡಲಾಗುವುದು. ಸಂಘದ ಕುಂದುಕೊರತೆ, ಸಮಸ್ಯೆಗಳನ್ನು ಒಕ್ಕೂಟದ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.

ಸಂಘದ ನಿರ್ದೇಶಕರಾದ ಕೆ.ಜೆ. ಯಶೋಧಾ, ಸಿ.ಎಸ್. ರತ್ನಾ, ಶೋಭಾ, ವನಜಾಕ್ಷಿ, ಎಸ್.ಆರ್. ಪೂಜಾ, ಹೇಮಲತಾ, ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಎನ್. ಆಶಾ ಉಪಸ್ಥಿತರಿದ್ದರು.