ಮಡಿಕೇರಿ, ಸೆ. ೨೪: ಕೊಡಗು ಜಿಲ್ಲಾ ವಿಷ್ಣು ಸೇನಾ ಸಮಿತಿ ವತಿಯಿಂದ ದಿ. ಡಾ. ವಿಷ್ಣುವರ್ಧನ್ ಅವರ ೭೪ನೇ ವರ್ಷದ ಹುಟ್ಟು ಹಬ್ಬವನ್ನು ಮಡಿಕೇರಿ ನಗರದ ಉಕ್ಕುಡ ರಸ್ತೆಯ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ರಫೀಕ್ ದಾದಾ ಡಾ. ವಿಷ್ಣುವರ್ಧನ್ ಅವರ ಜೀವನ ಚರಿತ್ರೆ, ಕೆಲವು ಕಹಿ ಘಟನೆಗಳು, ಅವರು ಕಷ್ಟಪಟ್ಟ ದಿನಗಳನ್ನು ಸಭೆಗೆ ವಿವರಿಸಿದರು. ಹಿರಿಯ ಪತ್ರಕರ್ತ ಎಂ.ಪಿ ಕೃಷ್ಣರಾಜು ಮಾತನಾಡಿ, ವಿಷ್ಣು ಸೇನಾ ಸಮಿತಿ ವತಿಯಿಂದ ಹಲವು ಜನಪರ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರಲಾಗುತ್ತಿದೆ, ಮುಂದೆಯೂ ವಿಷ್ಣುಸೇನಾ ಸಮಿತಿ ವತಿಯಿಂದ ಉತ್ತಮ ಕಾರ್ಯಕ್ರಮ ಮಾಡಲಿ ಎಂದು ಶುಭ ಹಾರೈಸಿದರು. ಕೊಡಗು ಹಿತರಕ್ಷಣಾ ವೇದಿಕೆಯ ರವಿಗೌಡ ಮಾತನಾಡಿ, ಸಂಘವನ್ನು ಕಟ್ಟಬಹುದು, ಆದರೆ ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಬಹಳ ಕಷ್ಟಕರವಾಗಿರುತ್ತದೆ. ಇದು ನಮ್ಮೆಲ್ಲರ ಅನುಭವವಾಗಿರುತ್ತದೆ ಎಂದು ಹೇಳಿದರು. ಜೂನಿಯರ್ ವಿಷ್ಣುವರ್ಧನ್ ಬೆಂಗಳೂರಿನ ಶ್ಯಾಂ ಮಾತನಾಡಿ ಇಂತಹ ಕಾರ್ಯಕ್ರಮ ಬಹಳ ಅದ್ಭುತವಾಗಿದೆ. ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿ ಅಭಿಮಾನಿಗಳ ಮುಂದೆ ಕಲಾ ಸೇವೆಯನ್ನು ಗುರುತಿಸಿದಕ್ಕೆ ಸಂತೋಷವಾಗಿದೆ. ಇಂಥ ಏನೇ ಕಾರ್ಯಕ್ರಮವಿದ್ದರೂ ಮನಪೂರ್ವಕವಾಗಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದರು.
ಫೈವ್ ಸ್ಟಾರ್ ಸಿಂಗರ್ಸ್ನ ಭಾಷಾ ಮತ್ತು ತಂಡದ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ಪುಟಾಣಿಗಳಾದ ಸಾನ್ವಿ. ಹಾಗೂ ಪ್ರೀತಿ ನೃತ್ಯ ಮೂಲಕ ಎಲ್ಲರನ್ನು ರಂಜಿಸಿದರು. ಮಂಗಳೂರಿನ ಗೊಂಬೆ ಕುಣಿತದ ಕಲಾವಿದರು ಪ್ರತಿಯೊಂದು ಗೀತೆಗಳಿಗೆ ಹೆಜ್ಜೆ ಹಾಕಿ ಮನೋರಂಜಿಸಿದರು. ಆರಾಧನಾ ಗಿರೀಶ್ ಕೆಲವು ಸೂಪರ್ ಹಿಟ್ ಚಿತ್ರದ ಗೀತೆಗಳನ್ನು ಹಾಡಿದರು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಮುನೀರ್ ಮಾಚರ್, ಸಮಾಜ ಸೇವಕ ಪಿ.ಜಿ. ಸುಕುಮಾರ್, ಅಂಬೇಡ್ಕರ್ ಭವನದ ಪದಾಧಿಕಾರಿಗಳಾದ ಶೇಖರ್, ವಿಷ್ಣುಸೇನಾ ಸಮಿತಿಯ ಖಜಾಂಚಿ ಪಿ. ಐ.ಅನ್ಸಾರ್, ಸದಸ್ಯರಾದ ರಮೇಶ್ ರೈ, ಟೆಂಪೋ ಉಮೇಶ್, ವಿನೇಶ್, ಕೆ.ಕೆ.ಜಾನ್ಸನ್, ಆಟೋ ಲತಿಫ್, ಮಂಗಳೂರಿನ ಶರೀಫ್, ಹಿರಿಯರಾದ ಮಾದೇವಣ್ಣ, ರೆಡ್ ಫೋರ್ಟ್ಶರೀಫ್, ಆಟೋ ಶರೀಫ್, ಕುಶಾಲನಗರದ. ವಿಷ್ಣುಸೇನಾ ಸಮಿತಿಯ ಪದಾಧಿಕಾರಿ ಚಂದ್ರಪ್ಪ, ಭಾಗಮಂಡಲ, ಕೊಡಗಿನ ಸುತ್ತ ಮುತ್ತಲ ಅಭಿಮಾನಿಗಳು ಭಾಗವಹಿಸಿದ್ದರು.
ಮಮತಾ ಆರ್ಯ ಪ್ರಾರ್ಥಿಸಿದರು. ಕವಯತ್ರಿ ದೀಪಿಕಾ ಸಂದೀಪ್ ನಿರೂಪಿಸಿ, ಪ್ರಾಸ್ತಾವಿಕ ನುಡಿಯಾಡಿದರು. ವಿಷ್ಣುಪ್ರಿಯ ನಾಗರಾಜ್ ಸ್ವಾಗತಿಸಿದರೆ, ಸಹ ಕಾರ್ಯದರ್ಶಿ ಪ್ರವೀಣ್ ಲೋಬೊ ವಂದಿಸಿದರು.