ವೀರಾಜಪೇಟೆ, ಸೆ. ೨೪: ಫೆಡರೇಷನ್ ಆಫ್ ಕೊಡವ ಸಮಾಜ, ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರಿಗೆ ಜೈನರ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನ ಗೌರಿ-ಗಣೇಶ ಉತ್ಸವ ಸಮಿತಿ ವತಿಯಿಂದ ಸನ್ಮಾನಿಸಿ ೨೦೨೪ ರ ಸಾಲಿನ ‘ಬಸವಶ್ರೀ ಪ್ರಶಸ್ತಿ’ಯನ್ನು ಶಾಸಕ ಎ.ಎಸ್. ಪೊನ್ನಣ್ಣ ಪ್ರದಾನ ಮಾಡಿದರು.
ಗೌರಿ ಗಣೇಶೋತ್ಸವದ ಅಂಗವಾಗಿ ಶ್ರೀ ಬಸವೇಶ್ವರ ದೇವಸ್ಥಾನ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವೀರಾಜಪೇಟೆ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಮಾತನಾಡಿ, ಗೌರಿ ಗಣೇಶೋತ್ಸವವನ್ನು ವೀರಾಜಪೇಟೆಯಲ್ಲಿ ಏಕಕಾಲದಲ್ಲಿ ವಿಸರ್ಜನೋತ್ಸವ ಮೆರವಣಿಗೆ ಒಗ್ಗಟ್ಟಿನಿಂದ ಎಲ್ಲರು ಭಾಗವಹಿಸಿ ಅಚರಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಬಸವೇಶ್ವರ ದೇವಸ್ಥಾನ ಉತ್ಸವ ಸಮಿತಿಯವರು ಹಲವಾರು ವರ್ಷಗಳಿಂದ ಕಲಾವಿದರು ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ನೀಡಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆಯನ್ನು ಗೌರಿ ಗಣೇಶ ಉತ್ಸವ ಸಮಿತಿ ಹಾಗೂ ಹಿರಿಯ ವಕೀಲರಾದ ರವೀಂದ್ರ ಕಾಮತ್ ವಹಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕಾಂತಿ ಸತೀಶ್ ಮಾತನಾಡಿ, ಸರಕಾರ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾಕ್ಕೆ ಅನುದಾನ ನೀಡುತ್ತಿದ್ದು, ವೀರಾಜಪೇಟೆಯಲ್ಲಿ ನಡೆಯುವ ಗೌರಿ ಗಣೇಶ ವಿಸರ್ಜನೋತ್ಸವಕ್ಕೂ ಸರಕಾರ ಮುಂದಿನ ವರ್ಷದಿಂದ ಅನುದಾನ ನೀಡುವಂತಾಗಬೇಕು ಎಂದರು.
ವೇದಿಕೆಯಲ್ಲಿ ಶಾಲಿನಿ ವಿಷ್ಣು ಕಾರ್ಯಪ್ಪ ಅವರಿಗೂ ಸನ್ಮಾನಿಸಿ ಗೌರವಿಸಲಾಯಿತು. ಐತಿಹಾಸಿಕ ಗೌರಿ ಗಣೇಶ ಜನೋತ್ಸವ ಸಮಿತಿಯ ಕಾರ್ಯಧ್ಯಕ್ಷ ಕೆ.ಸಿ. ಶಬರೀಶ್ ಶೆಟ್ಟಿ, ಕುರುಬರ ಜನಾಂಗದ ರಾಜ್ಯ ಅಧ್ಯಕ್ಷ ಕೆ.ಬಿ. ಶಾಂತಪ್ಪ, ವಕೀಲರು ಉತ್ಸವ ಸಮಿತಿಯ ನರೇಂದ್ರ ಕಾಮತ್ ಹಾಗೂ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.