ಮಡಿಕೇರಿ, ಸೆ. ೨೪: ಕೊಡಗಿನ ಕೊಡವ ಜನಾಂಗದ ಆದಿಕವಿ ಕೊಡಗಿನ ಶೇಕ್ಸ್ಪಿಯರ್ ಎಂದೇ ಪ್ರಸಿದ್ಧರಾದ ಅಪ್ಪನೆರವಂಡ ಹರದಾಸ ಅಪ್ಪಚ್ಚ ಕವಿ ಅವರ ೧೫೭ನೇ ಜನ್ಮ ಜಯಂತಿಯನ್ನು ಅಪ್ಪನೆರವಂಡ ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಹಾಗೂ ಊರಿನವರ ಸಹಕಾರದೊಂದಿಗೆ ಕವಿಯ ಸ್ವಂತ ಊರಾದ ಪಾರಾಣೆಯ ಕಿರಂದಾಡು ಗ್ರಾಮದಲ್ಲಿ ಕವಿಯ ಮನೆ ಇದ್ದ ಚಿಂಗೆಬೇಲ್ ಎಂಬ ಸ್ಥಳದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕುಟುಂಬದ ಹಿರಿಯರು ಮಾತನಾಡಿ, ಕೊಡವ ಜನಾಂಗಕ್ಕೆ ಕವಿ ನೀಡಿರುವ ಕೊಡುಗೆಯನ್ನು ಸ್ಮರಿಸಲಾಯಿತು. ಕವಿಯ ಬರವಣಿಗೆಯಾದ ಅಪ್ಪಚ್ಚಕವಿಯ ನಾಲ್ ನಾಟಕ ಆ ಕಷ್ಟಕರ ಕಾಲದಲ್ಲಿ ಬರೆದ ಅಮೋಘ ರತ್ನ ಎಂದು ಸ್ಮರಿಸಲಾಯಿತು.
ಜಿಲ್ಲೆಗೂ ನಾಡಿಗೂ ಕೀರ್ತಿ ತಂದ ಈ ಕವಿಯು ಮತ್ತೊಮ್ಮೆ ಈ ನಾಡಿನಲ್ಲಿ ಹುಟ್ಟಿ ಬರಲಿ ಎಂದು ಹಾರೈಸಲಾಯಿತು. ಜಿಲ್ಲಾದ್ಯಂತ ರಾಜ್ಯಾದ್ಯಂತ ಅವರ ಜನ್ಮ ಜಯಂತಿಯನ್ನು ಆಚರಿಸುವ ನಿಟ್ಟಿನಲ್ಲಿ ವಿವಿಧ ಸಮಾಜಗಳು, ಸಂಘಟನೆಗಳು ಕಾರ್ಯೋನ್ಮುಖರಾಗಿದ್ದು, ಕುಟುಂಬಸ್ಥರು ಹಾಗೂ ಊರಿನವರು ಸೇರಿ ಆಚರಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಕವಿ ಬರೆದ ಹಾಡನ್ನು ಹಾಡಲಾಯಿತು.
ಕುಟುಂಬದ ಹಿರಿಯರಾದ ಜಗದ, ಮಲ್ಲಿಗೆ, ರತಿ, ರಾಮು, ಪೊನ್ನಣ್ಣ, ಕುಟುಂಬ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚುಮ್ಮಿ ದೇವಯ್ಯ, ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಹಾಗೂ ಕಾರ್ಯಕ್ರಮ ರೂವಾರಿ ವಿನು ಮಾದಪ್ಪ, ಸದಸ್ಯರಾದ ರಾಜೇಶ್, ರಾಜ, ಅಕ್ಕವ್ವ, ಜೂಬಿ, ಚಿತ್ರ, ಶ್ಯಾಮಲ, ನಯನ, ರತ್ನ, ಪ್ರಭ ಯತೀಶ್, ಮುದ್ದಪ್ಪ, ಸುಬ್ರಮಣಿ, ಮಾಚಯ್ಯ ಹಾಗೂ ಊರಿನವರು ಭಾಗವಹಿಸಿದ್ದರು.