ಮಡಿಕೇರಿ, ಸೆ. ೨೪: ಕೊಡಗು ಜಿಲ್ಲಾ ಛಾಯಾಚಿತ್ರಗಾಹಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾ. ೨೮ ರಂದು ಕ್ಯಾಮರ ಕುರಿತು ಕಾರ್ಯಾಗಾರ ಹಾಗೂ ಛಾಯ ಕುಟುಂಬ ಸಮ್ಮಿಲನ ಕಾರ್ಯಕ್ರಮ ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಆವರ್ತಿ ಆರ್. ಮಹದೇವಪ್ಪ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೯ ಗಂಟೆಗೆ ಚಂಡೆ ವಾದ್ಯ, ಜಾನಪದ ಕಲಾತಂಡಗಳೊAದಿಗೆ, ಗಣ್ಯರ, ಛಾಯಾಗ್ರಾಹಕರ ಬೃಹತ್ ಮೆರವಣಿಗೆ ಕುಶಾಲನಗರದ ಗಣಪತಿ ದೇವಾಲಯದಿಂದ ರೈತ ಸಹಕಾರ ಭವನದವರಗೆ ನಡೆಯಲಿದೆ. ೯.೩೦ಕ್ಕೆ ನಡೆಯುವ ಕ್ಯಾಮರ ಕುರಿತ ಕಾರ್ಯಾಗಾರವನ್ನು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಕಾರ್ಯಾಗಾರವನ್ನು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಉದ್ಘಾಟಿಸಲಿದ್ದಾರೆ. ಛಾಯಾಚಿತ್ರ ಪ್ರದರ್ಶನಕ್ಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಶಾಲನಗರ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ. ದಿನೇಶ್, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್, ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣ ಕುಮಾರ್, ಬಿಜೆಪಿ ಮಂಡಲ ಕಾರ್ಯಾಧ್ಯಕ್ಷ ವಿ.ಎನ್. ಉಮಾಶಂಕರ್ ಭಾಗವಹಿಸಲಿದ್ದು, ಛಾಯಾ ಸಾಧಕ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಕೆ.ಪಿ. ನಾಗೇಂದ್ರ ಅವರನ್ನು ಅಭಿನಂದಿಸಲಾಗುವುದು ಎಂದು ವಿವರಿಸಿದರು.

ಮಧ್ಯಾಹ್ನ ೨ ಗಂಟೆಗೆ ನಡೆಯಲಿರುವ ಛಾಯಾ ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಪಶು ಸಂಗೋಪನ ಮತ್ತು ರೇಷ್ಮೆ ಖಾತೆ ಸಚಿವ ಕೆ. ವೆಂಕಟೇಶ್ ಉದ್ಘಾಟಿಸಲಿದ್ದು, ಮಡಿಕೇರಿ ಶಾಸಕ ಮಂತರ್ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಖ್ಯಾತ ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡ ಪ್ರಧಾನ ಭಾಷಣ ಮಾಡಲಿದ್ದು, ಇದೇ ಸಂದರ್ಭ ಖ್ಯಾತ ರಂಗಭೂಮಿ ಕಲಾವಿದ, ಚಲನಚಿತ್ರ ನಟ ಶೀನು ಮಿತ್ರ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. ಛಾಯಾಗ್ರಾಹಕರು ಹಾಗೂ ಅವರ ಕುಟುಂಬ ಒಂದೆಡೆ ಸೇರಲು ಕಾರ್ಯಕ್ರಮ ವೇದಿಕೆಯಾಗಿದೆ. ಕೊಡಗು ಮಾತ್ರವಲ್ಲದೆ ಹಾಸನ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಯಿಂದಲೂ ಛಾಯಾಗ್ರಾಹಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ರೋಶನ್, ಪ್ರಧಾನ ಕಾರ್ಯದರ್ಶಿ ಬಿ.ವೈ. ಲವಕುಮಾರ್, ನಿರ್ದೇಶಕ ಡೇವಿಡ್ ಸೊಲೋಮನ್ ಹಾಜರಿದ್ದರು.