ಕಣಿವೆ, ಸೆ. ೨೪: ಮನುಷ್ಯನ ಬದುಕಿನ ಒಂದು ವರ್ಣರಂಜಿತ ಭಾಗವಾಗಿರುವ ವಿದ್ಯಾರ್ಥಿ ಜೀವನವನ್ನು ಸೊಗಸಾಗಿಸಬೇಕೆಂದು ಮಡಿಕೇರಿ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕುಶಾಲನಗರದ ಅನುಗ್ರಹ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳ ಸ್ವಾಗತ ಹಾಗೂ ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಆಗಮಿಸಿ ಮಾತನಾಡಿದ ಅವರು, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮನುಷ್ಯನ ಜೀವ ಹಾಗೂ ಜೀವನ ಸಂಕೀರ್ಣ ಗೊಳ್ಳುತ್ತಿದೆ. ಕಲಿಕೆಯಲ್ಲಿ ನಿರತನಾಗಿರುವ ವಿದ್ಯಾರ್ಥಿಗೆ ತಾನು ಮುಂದೆ ಏನಾಗಲಿದ್ದೇನೆ ಎಂಬ ಅರಿವೇ ಇಲ್ಲದ ಕಾರಣ ಆದಷ್ಟು ಒಳಿತನ್ನು ಮಾಡುವ ಮೂಲಕ ಕೆಡುಕುಗಳನ್ನು ಮೆಟ್ಟಿ ನಿಲ್ಲಬೇಕು. ಕುಟುಂಬ, ಪರಿವಾರ, ಸಮಾಜ ದೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ವಿದ್ಯಾರ್ಥಿ ಜೀವನವನ್ನು ಸ್ಮರಣೀಯವಾಗಿಸಿ ಕೊಳ್ಳಲು ವಿದ್ಯಾರ್ಥಿಗಳು ಮುಂದಾಗ ಬೇಕು. ನಿರಂತರ ಅಧ್ಯಯನದ ಮೂಲಕ ಗುರಿ ಸಾಧನೆಗೆ ಮುಂದಾಗ ಬೇಕು. ದೇಶಪ್ರೇಮ ಮೈಗೂಡಿಸಿ ಕೊಳ್ಳಬೇಕು ಎಂದು ಹೇಳಿದರು.
ಅನುಗ್ರಹ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಕೆ.ಸತೀಶ್ ಮಾತನಾಡಿ, ತಂತ್ರಜ್ಞಾನ ಹಾಗೂ ಆಧುನಿಕತೆ ಮೇರೆ ಮೀರಿ ಬೆಳೆಯುತ್ತಿರುವ ಈ ಹೊತ್ತಿನಲ್ಲಿ ವಿದ್ಯಾರ್ಥಿಗಳು ಸ್ಪಷ್ಟ ಗುರಿಯತ್ತ ಕೇಂದ್ರೀಕರಿಸಬೇಕು. ಹೆತ್ತವರ ಆಸೆ ಹಾಗೂ ಬೋಧಕರ ಆಶಯಗಳನ್ನು ಮನಗಂಡು ಮುನ್ನುಗ್ಗುವ ಮೂಲಕ ಉತ್ತಮ ವ್ಯಕ್ತಿತ್ವ ಮೈಗೂಡಿಸಿಕೊಳ್ಳಲು ಕರೆ ಕೊಟ್ಟರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಹೆಚ್.ಬಿ. ಲಿಂಗಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ಜಾನಪದ ಪರಿಷತ್ತು ಕೋಶಾಧಿಕಾರಿ ಸಂಪತ್ ಕುಮಾರ್, ಕಾಲೇಜಿನ ನಿರ್ದೇಶಕರಾದ ಶೋಭಾ ಸತೀಶ್, ಶ್ಯಾಮಲಾ ನಾಗೇಂದ್ರ, ಕನ್ನಡ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ, ಉಪನ್ಯಾಸಕ ನೌಷದ್ ನಿರೂಪಿಸಿದರು.