ಸುಂಟಿಕೊಪ್ಪ, ಸೆ. ೨೨: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೩-೨೪ ನೇ ಸಾಲಿನಲ್ಲಿ ರೂ. ೫೭,೪೪,೩೯೮ ನಿವ್ವಳ ಲಾಭವನ್ನು ಗಳಿಸಿದೆ ಎಂದು ಅಧ್ಯಕ್ಷ ಕೆ.ಎಸ್. ಮಂಜುನಾಥ್ ಹೇಳಿದರು.

ಇಲ್ಲಿನ ಮಂಜುನಾಥಯ್ಯ ಸಹಕಾರ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ ೧೯೯೦ ಮಂದಿ ಸದಸ್ಯರಿದ್ದು, ಸಂಘದ ಸದಸ್ಯರಿಗೆ ಶೇ. ೧೫ ರಷ್ಟು ಡಿವಿಡೆಂಡ್ ಹೆಚ್ಚಿಸಲಾಗಿದೆ.

೮ ಗ್ರಾಹಕರ ಶಾಖೆಯ ಮೂಲಕ ಮಾಡಲಾದ ವ್ಯಾಪಾರ ವ್ಯವಹಾರ ರೂ. ೨೮,೯೮,೪೦೧೯ ರಷ್ಟಾಗಿದೆ. ಸಂಘದ ಸಾಲ ಮರುಪಾವತಿ ಪ್ರಮಾಣವು ಶೇ. ೯೮.೨ ಇದ್ದು, ಸರಕಾರದ ಬಡ್ಡಿ ರಿಯಾಯಿತಿ ಯೋಜನೆಯು ಜಾರಿಯಲ್ಲಿರುತ್ತದೆ ಎಂದು ಮಂಜುನಾಥ್ ಹೇಳಿದರು.

ಈಗಾಗಲೇ ವರದಿಯಾಗಿರು ವಂತೆ ಸಂಘದಲ್ಲಿ ಆಗಿರುವ ಹಣದ ದುರುಪಯೋಗದ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ ಎಂದು ಹಿರಿಯ ಸದಸ್ಯ ಎಂ.ಎ. ವಸಂತ ಪ್ರಶ್ನಿಸಿದಾಗ ಅಧ್ಯಕ್ಷ ಕೆ.ಎಸ್. ಮಂಜುನಾಥ್ ಪ್ರತಿಕ್ರಿಯಿಸಿ, ಈಗಾಗಲೇ ನ್ಯಾಯಾ ಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. ವಿಚಾರಣೆ ನಡೆಯುತ್ತಿದ್ದು, ಸಂಘದ ವತಿಯಿಂದ ಕ್ರಮ ವಹಿಸಲಾಗಿದ್ದು, ಹೆಚ್ಚು ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.

ಕಳೆದ ಮಹಾಸಭೆಯಲ್ಲೂ ಕೂಡ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಖಾಲಿ ಇದ್ದು, ಇದರ ಬಗ್ಗೆ ಪ್ರಗತಿ ಏನಾಗಿದೆ ಎಂದು ಹಿರಿಯ ಸದಸ್ಯರುಗಳಾದ ಕೆ.ಡಿ. ರಾಮಯ್ಯ ಮತ್ತು ಎಂ.ಎ. ವಸಂತ ಪ್ರಶ್ನಿಸಿದಾಗ ಈಗಾಗಲೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಇನ್ನೂ ೩ ಹುದ್ದೆಗಳು ಖಾಲಿಯಿದ್ದು, ಸರಕಾರದ ಮಟ್ಟದಲ್ಲಿ ಹುದ್ದೆ ಭರ್ತಿಗೆ ಪ್ರಕ್ರಿಯೆಗಳು ನಡೆದಿದೆ ಎಂದು ಅಧ್ಯಕ್ಷ ಮಂಜುನಾಥ್ ಮಾಹಿತಿ ನೀಡಿದರು.

ಸಂಘದ ವ್ಯವಸ್ಥೆಯಲ್ಲಿ ಸಾಲ ಪಡೆದ ಕೃಷಿಕರು ಕಾರಣಾಂತರಗಳಿAದ ಸಾಲ ಮರುಪಾವತಿಸಲು ಸಾಧ್ಯವಾಗದ ಸಂದರ್ಭ ಅವರ ಜಾಮೀನು ದಾರರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಒಂದು ವೇಳೆ ಸಾಲಗಾರರು ಸಾಲ ಮರುಪಾವತಿ ಮಾಡಿದ ಸಂದರ್ಭ ಜಾಮೀನುದಾರನ್ನು ಸಾಲಗಾರರ ಪರವಾಗಿ ಕಟ್ಟಿದ ಸಾಲವನ್ನು ಕಟ್ಟಿದ ಬಡ್ಡಿ ಸಮೇತ ಹಿಂತಿರುಗಿಸುವ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದನ್ನು ಆದಷ್ಟು ಸಾರ್ವಜನಿಕರ ತಿಳುವಳಿಕೆಗೆ ತರಬೇಕೆಂದು ಸದಸ್ಯ ಪಿ.ಎಂ. ಬಿಜು ಆಗ್ರಹಿಸಿದರು.

ಇದೇ ವೇಳೆ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನವನ್ನು ವಿತರಿಸಲಾಯಿತು.

ಸಭೆಯ ಮೊದಲಿಗೆ ಮೃತಪಟ್ಟ ಸದಸ್ಯರುಗಳಿಗೆ ಸಂತಾಪ ಸೂಚಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಕೆ.ವಿ. ರಮ್ಯ, ಸದಸ್ಯರುಗಳಾದ ಎಂ.ಎನ್. ಕೊಮಾರಪ್ಪ, ಎನ್.ಸಿ. ಪೊನ್ನಪ್ಪ, ದಾಸಂಡ ರಮೇಶ್ ಚಂಗಪ್ಪ, ಜೆರ್ಮಿ ಡಿಸೋಜ, ಡಿ.ಕೆ. ಗಂಗಾಧರ, ಡಾ. ಶಶಿಕಾಂತ್ ರೈ, ಕೆ.ಪಿ. ಜಗನ್ನಾಥ್, ಪಿ.ಪಿ. ಉದಯಕುಮಾರ್, ಕೆ.ಆರ್. ಮಂಜುನಾಥ, ಬಿ.ಕೆ. ದಯಾನಂದ, ಪಿ.ಪಿ. ಲೀಲಾವತಿ ಮತ್ತು ಪ್ರಬಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮಿತ್ರ ಸೇರಿದಂತೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿAದ ವೀಕ್ಷಕರಾಗಿ ರತ್ನ ಉಪಸ್ಥಿತರಿದ್ದರು.