ಮಡಿಕೇರಿ, ಸೆ. ೨೨: ವಚನ ಸಾಹಿತ್ಯವೂ ಸದಾಚಾರ ಹಾಗೂ ಸದ್ವಿಚಾರಗಳ ಮೂಲಕ ಮನುಷ್ಯ ತನ್ನ ಅಮೂಲ್ಯ ಜೀವನವನ್ನು ಕಟ್ಟಿಕೊಳ್ಳಲು ಪ್ರೇರೇಪಿಸುವ ಸಂಜೀವಿನಿ ಎಂದು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ ಬಣ್ಣಿಸಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮಡಿಕೇರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಮಡಿಕೇರಿಯ ಶರಣ ಮುರುಗೇಶ್ ಅವರು ಸ್ಥಾಪಿಸಿರುವ ಲಿಂ.ಹೆಚ್.ಬಿ. ಶೀಲವಂತ ಹಾಗೂ ಸಿದ್ದಲಿಂಗಪ್ರಸಾದ್ ದತ್ತಿ ಶರಣ ಸಂಸ್ಕೃತಿ ಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ಪ್ರತಿಪಾದಿಸುವ ಸರ್ವಸಮಾನತೆಯ ಮತ್ತು ಮಾನವ ಸಮಾಜದ ಸರ್ವಾಂಗೀಣ ಪ್ರಗತಿಯ ಪರಿಕಲ್ಪನೆಗಳು ಜಗತ್ತಿನ ಇಡೀ ಮನುಕುಲಕ್ಕೆ ಮಾರ್ಗದರ್ಶಿಯಾಗಿವೆ. ಹನ್ನೆರಡನೇ ಶತಮಾನದಲ್ಲಿ ತಾಂಡವಿಸಿದ್ದ ಮೂಢನಂಬಿಕೆ, ಅಂಧ ಶ್ರದ್ಧೆ ಹಾಗೂ ಮೂಲಭೂತವಾದಗಳನ್ನು ಪ್ರಶ್ನಿಸಿ ಪ್ರಗತಿಪರ ಚಿಂತನೆಗಳನ್ನು ಮೊಳಗಿಸಿದ ಕೀರ್ತಿ ವಚನಕಾರರದ್ದು, ಬಸವಣ್ಣ ಅವರು ನಾಡಿಗೆ ನೀಡಿರುವ ಸಪ್ತಸೂತ್ರಗಳ ವಚನ ಕಲಬೇಡ, ಕೊಲಬೇಡ, ಹುಸಿಯನುಡಿಲು ಬೇಡ ಎಂಬ ವಚನವನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎಂದು ಅನಂತಶಯನ ಆಶಿಸಿದರು.

"ಶರಣ ಸಂಸ್ಕೃತಿ ಪ್ರಸಾರ "ದತ್ತಿ ಉಪನ್ಯಾಸ ನೀಡಿದ ಕೊಡಗು ಜಿಲ್ಲಾ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ವಚನ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಸಾಮಾಜಿಕ ಹಾಗೂ ಧಾರ್ಮಿಕ ವಿಚಾರಗಳನ್ನು ಅರಿಯಲು ಅನುವಾಗುತ್ತದೆ. ಸಮಾಜದಲ್ಲಿ ಇಂದು ತಾಂಡವವಾಡುತ್ತಿರುವ ಎಲ್ಲಾ ಸಂಕೋಲೆಗಳಿಗೆ ವಚನಗಳ ಅರಿವು ಹಾಗೂ ಆಚರಣೆ ದಿವ್ಯ ಔಷಧಿ ಎಂದರು.

ಮಡಿಕೇರಿ ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಜಾನಪದ ಪರಿಷತ್ತಿನ ಕೋಶಾಧಿಕಾರಿ ಸಂಪತ್ ಕುಮಾರ್, ಕೊಡಗು ಗೌಡ ವಿದ್ಯಾಸಂಸ್ಥೆಯ ಅಧ್ಯಕ್ಷ ಅಂಬೆಕಲ್ ನವೀನ್, ದತ್ತಿ ದಾನಿ ಮುರುಗೇಶ್ ಹಾಗೂ ಕಮಲಾ ಮುರುಗೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ವಸತಿ ನಿಲಯದ ಮೇಲ್ವಿಚಾರಕಿ ಕರುಣಾಕ್ಷಿ ಇದ್ದರು. ನೇತ್ರ ತಜ್ಞೆ ವಿಜಯಲಕ್ಷಿö್ಮ ಹಾಗೂ ಕಮಲಾ ಮುರುಗೇಶ್ ವಚನಗಳನ್ನು ವಾಚಿಸಿದರು. ವಿದ್ಯಾರ್ಥಿನಿ ಪ್ರನುತಾ ಸ್ವಾಗತಿಸಿ, ಸಿಂಚನ ವಂದಿಸಿದರು.