ಮಡಿಕೇರಿ, ಸೆ. ೨೨: ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಾಚರಣಿಯಂಡ ಸುಮನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಸಭಾಂಗಣದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸುಮನ್ ಅವರು, ಸಂಘವು ಪ್ರಸ್ತುತ ಸಾಲಿನಲ್ಲಿ ಕೆಸಿಸಿ ಫಸಲು ಸಾಲ, ಆಭರಣ ಸಾಲ, ಗೊಬ್ಬರ ಖರೀದಿ ಸಾಲ ಇನ್ನಿತರ ಸಾಲಗಳು ಸೇರಿ ಒಟ್ಟು ರೂ. ೧೩ ಕೋಟಿ ಸಾಲ ವಿತರಣೆ ಮಾಡಿದ್ದು, ವರ್ಷಾಂತ್ಯಕ್ಕೆ ರೂ. ೫.೨೯ ಕೋಟಿ ಠೇವಣಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಸಂಘವು ಆಡಿಟ್ ‘ಎ’ ವರ್ಗೀಕರಣದಲ್ಲಿ ಮುಂದು ವರೆದಿದ್ದು, ೨೦೨೩-೨೪ನೇ ಸಾಲಿನಲ್ಲಿ ನಿವ್ವಳ ರೂ. ೨೮.೬೨ ಲಕ್ಷ ಲಾಭ ಗಳಿಸಿದ್ದು, ಸಂಘದ ಸದಸ್ಯರುಗಳಿಗೆ ಶೇ. ೧೩ ಡಿವಿಡೆಂಡ್ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದರು. ಸಂಘದ ಸದಸ್ಯರುಗಳು ಸಂಘದ ಅಭಿವೃದ್ಧಿಗಾಗಿ ಹಲವು ಸಲಹೆ ಸೂಚನೆಗಳನ್ನು ನೀಡಿದರು. ೧೦ನೇ ತರಗತಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳ ವಿದ್ಯಾಭಾಸಕ್ಕೆ ಸಂಘದ ವತಿಯಿಂದ ಪ್ರೋತ್ಸಾಹ ಧನ ವಿತರಿಸಲಾಯಿತು. ಸಂಘದ ಉಪಾಧ್ಯಕ್ಷÀ ಪೊಡನೋಳನ ಶ್ರೀನಿವಾಸ್ ಸ್ವಾಗತಿಸಿ, ನಿರ್ದೇಶಕ ಕೂರನ ಕಿಶೋರ್ ಕುಮಾರ್ ವಂದಿಸಿದರು. ನಿರ್ದೇಶಕರಾದ ವೀಣಾ ಸೋಮಯ್ಯ ಪ್ರಾರ್ಥಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಬಿ. ಜ್ಯೋತಿ, ನಿರ್ದೇಶಕರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.