ವೀರಾಜಪೇಟೆ, ಸೆ. ೨೩: ಬಾಳುಗೋಡುವಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟ (ಫೆಡರೇಷನ್ ಆಫ್ ಕೊಡವ ಸಮಾಜ)ದಲ್ಲಿರುವ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮುಚ್ಚಯದಲ್ಲಿ ರೂ. ೬ ಕೋಟಿಯ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗೆ ಇಂದು ಚಾಲನೆ ನೀಡಲಾಯಿತು.
ಕೊಡವ ಜನಾಂಗದ ಶ್ರೇಯೋಭಿವೃದ್ಧಿಗೆ ಎಂದು ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಗಿನ ಬಜೆಟ್ನಲ್ಲಿ ರೂ. ೧೦ ಕೋಟಿ ಅನುದಾನವನ್ನು ಘೋಷಿಸಲಾಗಿತ್ತು. ಆದರೆ ಕೆಲವಾರು ಕಾರಣಗಳು ಹಾಗೂ ಹಲವು ಗೊಂದಲಗಳು ಉಂಟಾಗಿದ್ದ ಹಿನ್ನೆಲೆಯಲ್ಲಿ ಅನುದಾನ ಘೋಷಣೆಯಾಗಿದ್ದರೂ ಬಳಕೆ ಹೇಗೆ ಎಂಬ ಚರ್ಚೆ- ಪ್ರಶ್ನೆಗಳಿಂದಾಗಿ ಇದು ಇನ್ನೂ ಪ್ರಾರಂಭಗೊAಡಿರಲಿಲ್ಲ.
ಈ ಅನುದಾನ ಹಂಚಿಕೆ ವಿಚಾರದಲ್ಲೂ ಹಲವು ಅಡೆ - ತಡೆಗಳು ಎದುರಾಗಿದ್ದವು. ನಂತರದಲ್ಲಿ ರೂ. ೧೦ ಕೋಟಿ ಅನುದಾನವನ್ನು ಬಾಳುಗೋಡುವಿನ ಕೊಡವ ಸಾಂಸ್ಕೃತಿಕ ಹಾಗೂ ಕ್ರೀಡಾಸಮುಚ್ಚಯದ ಅಭಿವೃದ್ಧಿಗಾಗಿ ರೂ. ೬ ಕೋಟಿ, ಭಾಗಮಂಡಲದಲ್ಲಿ ಕೊಡವ ಸಮುದಾಯ ಭವನ ನಿರ್ಮಾಣಕ್ಕೆ ರೂ. ೧ ಕೋಟಿ ಹಾಗೂ ೩೦ ಕೊಡವ ಸಮಾಜಗಳ ಅಭಿವೃದ್ಧಿಗೆ ಎಂದು ರೂ. ೩ ಕೋಟಿಯಂತೆ ಹಂಚಿಕೆ ಮಾಡುವ ನಿರ್ಧಾರಕ್ಕೆ ಹಲವು ಚರ್ಚೆಗಳ ಬಳಿಕ ಬರಲಾಗಿತ್ತು.
ಆದರೂ ಕೆಲವೊಂದು ತಾಂತ್ರಿಕ ತೊಂದರೆಗಳೂ ಎದುರಾಗಿ ಇದಕ್ಕೆ ಈ ತನಕ ಕಾಲ ಕೂಡಿ ಬಂದಿರಲಿಲ್ಲ. ಈ ಬಗ್ಗೆ ಒಕ್ಕೂಟದ ಪದಾಧಿಕಾರಿಗಳು ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೂ ನಿಯೋಗ ತೆರಳಿ ಪ್ರಕಟಿತ ಯೋಜನೆಯ ಕಾರ್ಯಗತಕ್ಕೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇದೀಗ ಕೆಲ ಸಮಯದ ಹಿಂದೆ ಶಾಸಕ ಪೊನ್ನಣ್ಣ ಅವರು ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದು ಉದ್ದೇಶಿಸಿದಂತೆ ಯೋಜನೆ ಪ್ರಾರಂಭಿಸಲು ಹಸಿರು ನಿಶಾನೆ ತೋರಿದ್ದರು. ಇದಕ್ಕೆ ಒಕ್ಕೂಟ ಸೇರಿದಂತೆ ಸಹಮತ ವ್ಯಕ್ತವಾಗಿತ್ತು. ಎಂಎಲ್ಸಿ ಸುಜಾ ಕುಶಾಲಪ್ಪ ಅವರೂ ಅನುದಾನ ಹಂಚಿಕೆ ವಿಚಾರದಲ್ಲಿ ಹಲವು ಪ್ರಯತ್ನ ನಡೆಸಿರುವದೂ ಈ ಹಿಂದೆ ಸುದ್ದಿಯಾಗಿತ್ತು. ಇದೀಗ ರೂ. ೧೦ ಕೋಟಿ ಬಳಕೆಯ ವಿಚಾರ ಅಂತಿಮವಾಗಿದ್ದು, ಯೋಜನೆಗೆ ಚಾಲನೆ ನೀಡಲಾಗಿದೆ.
ಶಾಸಕ - ಎಂಎಲ್ಸಿ ಚಾಲನೆ
ಕೊಡವ ಜನಾಂಗ ಶ್ರೇಯೋಭಿವೃದ್ದಿ ಯೋಜನೆ ಅಡಿಯಲ್ಲಿ ಬಾಳುಗೋಡುವಿನಲ್ಲಿರುವ ಫೆಡರೇಷನ್ ಆಫ್ ಕೊಡವ ಸಮಾಜ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಬಿಡುಗಡೆಗೊಳಿಸಿರುವ ರೂ. ೬ ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ಫೆಡರೇಶನ್ ಅಫ್ ಕೊಡವ ಸಮಾಜವು ಸರ್ಕಾರಕ್ಕೆ ನೀಡಿರುವ ಕ್ರಿಯಾಯೋಜನೆಯ ಅನ್ವಯ ಸರಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತು ಜಿಲ್ಲಾಧಿಕಾರಿ ಖಾತೆಗೆ ಬಿಡುಗಡೆಯಾಗಿರುವ ಅನುದಾನವನ್ನು ಬಳಕೆ ಮಾಡಿಕೊಂಡು ಒಟ್ಟು ರೂ. ೬ ಕೋಟಿ ವೆಚ್ಚದಲ್ಲಿ ಸಮಾಜದ ಆವರಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳು ನಡೆಯಲಿವೆ. ಕೊಡವ ಪದ್ಧತಿ, ಆಚಾರ-ವಿಚಾರಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಸುಸಜ್ಜಿತವಾದ ವಸ್ತು ಸಂಗ್ರಹಾಲಯ, ಯೋಧ ಸ್ಮಾರಕ ದುರಸ್ತಿ, ತಡೆಗೋಡೆ ನಿರ್ಮಾಣ, ಕ್ರೀಡಾಂಗಣದ ಸುತ್ತ ತಡೆಗೋಡೆ, ಅಡುಗೆ ಮನೆ ದುರಸ್ತಿ, ಭೋಜನಾಲಯ ವಿಸ್ತರಣೆ ಸೇರಿದಂತೆ ಇನ್ನಿತರ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ಉದ್ದೇಶಿತ ಕಾಮಗಾರಿಗೆ ಚ್ಯುತಿ ಬಾರದ ರೀತಿಯಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಂಡು ನಿಗದಿಗೊಳಿಸಿರುವ ಅವಧಿಯಲ್ಲಿ ನಿರ್ಮಾಣ ಕಾರ್ಯ ಮುಗಿಸುವಂತೆ ಗುತ್ತಿಗೆದಾರಿಗೆ ಈ ಸಂದರ್ಭ ಸೂಚಿಸಿದರು.
(ಮೊದಲ ಪುಟದಿಂದ) ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಕೊಡವ ಸಮಾಜಗಳ ಮನವಿ ಮೇರೆಗೆ ರಾಜ್ಯ ಸರ್ಕಾರ ಒಟ್ಟು ರೂ. ೧೦ ಕೋಟಿ ಹಣವನ್ನು ಕೊಡವ ಸಮಾಜಗಳ ಅಭಿವೃದ್ಧಿ ಕಾರ್ಯಗಳಿಗಾಗಿ ನೀಡಿದೆ. ವಿವಿಧ ಕೊಡವ ಸಮಾಜಗಳ ಅಭಿವೃದ್ದಿಗಾಗಿ ತಲಾ ೧೦ ಲಕ್ಷ, ಭಾಗಮಂಡಲದಲ್ಲಿ ಕೊಡವ ಸಮುದಾಯ ಭವನ ನಿರ್ಮಾಣಕ್ಕೆ ರೂ. ೧ ಕೋಟಿ ಮತ್ತು ಬಾಳುಗೋಡು ಫೆಡರೇಶನ್ ಆಫ್ ಕೊಡವ ಸಮಾಜದ ಆವರಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ರೂ.೬ ಕೋಟಿ ಅನುದಾನವನ್ನು ಸರಕಾರ ಬಿಡುಗಡೆ ಮಾಡಿದೆ. ಬಾಳುಗೋಡು ಸಮಾಜದಲ್ಲಿ ನಡೆಯುವ ಸಮಾರಂಭದಲ್ಲಿ ಬೃಹತ್ ಶಾಮಿಯಾನ ಅಳವಡಿಸಿ ಭೋಜನಕ್ಕೆ ವ್ಯವಸ್ಥೆ ಮಾಡುವ ಪರಿಸ್ಥಿತಿ ಇದೆ. ಇದರಿಂದ ಅಯೋಜಕರಿಗೆ ವೆಚ್ಚ ಅಧಿಕವಾಗುತ್ತಿದ್ದ ಹಿನ್ನೆಲೆಯಲ್ಲಿ ಶಾಶ್ವತ ಭೋಜನಾಲಯದ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಫೆಡರೇಶನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ರಾಜ್ಯದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದÀರ್ಭದಲ್ಲಿ ರೂ. ೧೫ ಕೋಟಿ ಅನುದಾನ ನೀಡುವಂತೆ ಬೇಡಿಕೆ ಇಟ್ಟಿದ್ದೆವು. ಆದರೆ, ಅನುದಾನ ಬಿಡುಗಡೆಗೊಂಡಿರಲಿಲ್ಲ. ಹಿಂದಿನ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಂದÀರ್ಭದಲ್ಲಿ ರೂ. ೧೦ ಕೋಟಿ ಅನುದಾನಕ್ಕೆ ಮನವಿ ಮಾಡಲಾಗಿತ್ತು. ಇದೀಗ ಘೋಷಿತ ಅನುದಾನ ಬಿಡುಗಡೆಗೊಂಡಿದೆ. ತಲಾ ೧೦ ಲಕ್ಷದಂತೆ ೩೦ ಕೊಡವ ಸಮಾಜಕ್ಕೆ ಅಭಿವೃದ್ದಿ ಕಾರ್ಯಗಳಿಗೆ ನೀಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಭಾಗಮಂಡಲದಲ್ಲಿ ಕೊಡವ ಸಮುದಾಯ ಭವನ ನಿರ್ಮಾಣಕ್ಕೆ ರೂ. ೧ ಕೋಟಿ ಬಿಡುಗಡೆಗೊಳಿಸಲಾಗಿದೆ. ಉಳಿದ ರೂ. ೬ ಕೋಟಿ ಬಾಳುಗೋಡು ಕೊಡವ ಸಮಾಜ ವಿವಿಧ ಅಭಿವೃದ್ದಿಗಾಗಿ ವಿನಿಯೋಗ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭ ಫೆಡರೇಶನ್ ಆಫ್ ಕೊಡವ ಸಮಾಜದ ಪದಾಧಿಕಾರಿಗಳಾದ ಕಾರ್ಯದರ್ಶಿ, ವಾಟೇರಿರ ಶಂಕರಿ ಪೂವಯ್ಯ, ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ಕಟ್ಟಡ ಉಸ್ತುವಾರಿ ಸಮಿತಿಯ ಕೋಲತಂಡ ಬೋಪಯ್ಯ, ಚೇಂದ್ರಿಮಾಡ ಗಣೇಶ್, ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ತಂಬುಕುತ್ತಿರ ಮಧು, ವೀರಾಜಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಹಾಜರಿದ್ದರು,