ಕೂಡಿಗೆ, ಸೆ. ೨೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಸಮೀಪದ ಜೇನುಕಲ್ಲು ಬೆಟ್ಟ (ಭುವನಗಿರಿ) ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಟಿ.ಕೆ. ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಒಕ್ಕೂಟದ ವಿಸ್ತರಣಾಧಿಕಾರಿ ವೀಣಾ ಮಾತನಾಡಿ, ಸಂಘವು ಈ ಸಾಲಿನಲ್ಲಿ ರೂ. ೪.೪೩ ಲಕ್ಷ ನಿವ್ವಳ ಲಾಭಾಂಶ ಗಳಿಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳಿಗೆ ಒಕ್ಕೂಟದ ವತಿಯಿಂದ ಸಹಕಾರ ನೀಡಲಾಗುವುದು ಎಂದರು.

ಸAಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಮುಂದಿನ ದಿನಗಳಲ್ಲಿ ಸಹಕಾರ ಸಂಘದ ಕಟ್ಟಡದ ಪಕ್ಕದಲ್ಲಿ ಶೆಡ್ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಕೆ.ಆರ್. ಜಗದೀಶ್, ನಿರ್ದೇಶಕರುಗಳಾದ ಕೆ.ಎಸ್. ಜೋಯಪ್ಪ, ನಾಗರಾಜು, ಬಿ.ಆರ್. ಧರ್ಮದಾಸ್. ಶಂಕರನ್, ಅನ್ನಮ್ಮಬಿಜು, ಜ್ಯೋತಿ ವಿಜಯಕುಮಾರ್, ಮಹೇಶ್, ಪಾರ್ವತಿ, ಸೇರಿದಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಂ. ಬಸವರಾಜ್ ಹಾಜರಿದ್ದರು.

ಈ ಸಂದರ್ಭ ಕಳೆದ ಸಾಲಿನ ನಡಾವಳಿಕೆ ಮತ್ತು ಆಡಿಟ್ ವರದಿಯನ್ನು ಅಂಗೀಕರಿಸಲಾಯಿತು. ಕಳೆದ ಸಾಲಿನಲ್ಲಿ ಸಂಘಕ್ಕೆ ಹೆಚ್ಚು ಹಾಲನ್ನು ನೀಡಿದ ರೈತರಿಗೆ ಬಹುಮಾನವನ್ನು ನೀಡಲಾಯಿತು. ಬಸವರಾಜ್ ಸ್ವಾಗತಿಸಿ, ವಂದಿಸಿದರು.