ರೂಮ್‌ಮೇಟ್ ಹತ್ಯೆಯೊಂದಿಗೆ ಅಂತ್ಯವಾದ ತ್ರಿಕೋನ ಪ್ರೇಮಕತೆ

ಬೆಂಗಳೂರು, ಸೆ. ೨೨: ಗೆಳತಿ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತಾನು ಪ್ರೀತಿಸುತ್ತಿರುವ ಹುಡುಗಿಯನ್ನು ತನ್ನ ಸ್ನೇಹಿತ ಕೂಡ ಲವ್ ಮಾಡುತ್ತಿದ್ದಾನೆ ಎಂದು ತಿಳಿದ ನಂತರ ಹುಟ್ಟುಹಬ್ಬದ ದಿನವೇ ಗೆಳೆಯನನ್ನು ಇಟ್ಟಿಗೆಯಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತನನ್ನು ಗೆದ್ದಲಹಳ್ಳಿ ನಿವಾಸಿ ವರುಣ್ ಕೋಟ್ಯಾನ್ ಎಂದು ಗುರುತಿಸಲಾಗಿದ್ದು, ಆತನ ರೂಮ್‌ಮೇಟ್ ದಿವೇಶ್ ಎಂಬಾತ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿ ಮತ್ತು ಮೃತ ಯುವಕ ಒಬ್ಬಳೇ ಯುವತಿಯನ್ನು ಪ್ರೀತಿಸುತ್ತಿದ್ದರು. ಈ ವಿಷಯದಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಸಂಬAಧ ದಿವೇಶ್‌ನನ್ನು ಬಂಧಿಸಲಾಗಿದೆ.

ಮೈದಾನದ ಗೇಟ್ ಬಿದ್ದು ಬಾಲಕ ಸಾವು

ಬೆಂಗಳೂರು, ಸೆ. ೨೨: ಮಲ್ಲೇಶ್ವರಂನಲ್ಲಿರುವ ಬಿಬಿಎಂಪಿ ಆಟದ ಮೈದಾನದ ಗೇಟ್ ಬಿದ್ದು ೧೧ ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಮೃತ ಬಾಲಕನನ್ನು ನಿರಂಜನ್ ಎಂದು ಗುರುತಿಸಲಾಗಿದೆ. ನಿರಂಜನ್, ಆಟವಾಡಲು ಮೈದಾನದ ಗೇಟ್ ಓಪನ್ ಮಾಡುತ್ತಿದ್ದಂತೆ ಗೇಟ್ ಬಾಲಕನ ಮೇಲೆಯೇ ಬಿದ್ದಿದೆ. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಕೂಡಲೇ ಸ್ಥಳೀಯರು ಬಾಲಕನನ್ನು ಕೆ.ಸಿ. ಜನರಲ್ ಆಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಬಾಲಕ ಕೊನೆಯುಸಿರೆಳೆದಿದ್ದಾರೆ.

ಮತಾಂತರ ಮಾಡುತ್ತಿದ್ದ ೫ ಮಂದಿಯ ಬಂಧನ

ಮಥುರಾ, ಸೆ. ೨೨: ಉತ್ತರ ಪ್ರದೇಶದ ಮಥುರಾದಲ್ಲಿ ಮತಾಂತರ ಮಾಡುತ್ತಿದ್ದ ೫ ಮಂದಿಯನ್ನು ಬಂಧಿಸಲಾಗಿದೆ. ಬಂಧಿತರು ಜನರನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡುತ್ತಿದ್ದರು. ತುಳಸಿ ನಗರ ಇಂದ್ರಪುರಿ ಕಾಲೋನಿಯಲ್ಲಿ ನಡೆಯುತ್ತಿರುವ ಧರ್ಮ ಸಭೆ (ಧಾರ್ಮಿಕ ಸಭೆ) ಕುರಿತು ಮಾಹಿತಿ ಪಡೆದು ಪೊಲೀಸರು ಪರಿಶೀಲನೆ ನಡೆಸಲು ಮುಂದಾದಾಗ ಮತಾಂತರಕ್ಕಾಗಿ ಸುಮಾರು ೪೮ ಪುರುಷರು ಮತ್ತು ಮಹಿಳೆಯರು ಜಮಾಯಿಸಿರುವುದು ಕಂಡುಬAತ್ತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ. ಆರೋಪಿಗಳನ್ನು ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಮತಾಂತರ ನಿಷೇಧ ಕಾಯಿದೆ, ೨೦೨೧ ರ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ. ಸ್ಯಾಮ್ಸನ್ ಸ್ಯಾಮುಯಲ್, ಅಮರ್ದಿಯೋ, ವಿಕಾಸ್ ಭೋಯ್, ಅಜಯ್ ಸೆಲ್ವರಾಜ್ ಮತ್ತು ರಾಕೇಶ್ ಬಂಧಿತ ಆರೋಪಿಗಳಾಗಿದ್ದಾರೆ.

ಮಚ್ಚಿನಿಂದ ಕೊಚ್ಚಿ ಉದ್ಯಮಿಯ ಬರ್ಬರ ಹತ್ಯೆ

ಕಾರವಾರ, ಸೆ. ೨೨: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೊಣ ಗ್ರಾಮದ ಮನೆಯಲ್ಲಿ ನಸುಕಿನ ಜಾವ ಬರ್ಬರ ಕೊಲೆಯಾಗಿದೆ. ಬೆಳ್ಳಂಬೆಳಗ್ಗೆ ಮಹಾರಾಷ್ಟ್ರದ ಪುಣೆಯ ಉದ್ಯಮಿ ವಿನಾಯಕ ನಾಯ್ಕ (೫೨) ಎಂಬವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಬೆಳ್ಳಂಬೆಳಗ್ಗೆ ಅಪರಿಚಿತರು ಏಕಾಏಕಿ ಬಂದು ವಿನಾಯಕ ದಂಪತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಮಚ್ಚಿನ ಏಟಿಗೆ ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಮಹಿಳೆಯನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಚಿತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪತ್ನಿ ಸಮೇತ ಪುಣೆಯಲ್ಲಿ ವಾಸವಾಗಿದ್ದ ವಿನಾಯಕ್ ಅವರು ಕಳೆದ ವಾರ ಗ್ರಾಮದೇವರ ಜಾತ್ರೆಗೆಂದು ಕಾರವಾರಕ್ಕೆ ಬಂದಿದ್ದರು. ಇಂದು ಬೆಳಗ್ಗೆ ಪುಣೆಗೆ ಹೋಗುವುದಾಗಿ ಸ್ನೇಹಿತರಿಗೆ ತಿಳಿಸಿದ್ದರು.

ಪಾಕ್ ಒಳ ನುಸುಳುಕೋರನ ಬಂಧನ

ಜಮ್ಮು-ಕಾಶ್ಮೀರ, ಸೆ. ೨೨: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಗ್ಗಲು ಯತ್ನಿಸಿದ ೩೫ ವರ್ಷದ ಪಾಕಿಸ್ತಾನಿ ಒಳ ನುಸುಳುಕೋರನನ್ನು ಭಾರತೀಯ ಸೇನಾಪಡೆಗಳು ಭಾನುವಾರ ಬಂಧಿಸಿವೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾನೆ ಗಡಿಯಾಚೆಯಿಂದ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸಿದಾಗ ಒಳ ನುಸುಳುಕೋರನನ್ನು ಸೇನಾಪಡೆಗಳು ತಡೆದು ವಶಕ್ಕೆ ತೆಗೆದುಕೊಂಡಿವೆ. ಭಾರತದ ಗಡಿಯೊಳಗೆ ನುಸುಳುವ ಪ್ರಯತ್ನದ ಹಿಂದಿನ ಉದ್ದೇಶವನ್ನು ಖಚಿತಪಡಿಸಿಕೊಳ್ಳಲು ಬಂಧಿತ ನುಸುಳುಕೋರನನ್ನು ಸೇನೆಯು ವಿಚಾರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಚAದ್ರಬಾಬು ನಾಯ್ಡು ವಿರುದ್ಧ ಪ್ರಧಾನಿಗೆ ಪತ್ರ ಬರೆದ ಜಗನ್ ಮೋಹನ್ ರೆಡ್ಡಿ

ವಿಜಯವಾಡ, ಸೆ. ೨೨: ತಿರುಪತಿ ತಿಮ್ಮಪ್ಪ ಲಡ್ಡು ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಿಂದಿನ ಸರ್ಕಾರದಲ್ಲಿ ತಿರುಪತಿ ಲಡ್ಡು ಪ್ರಸಾದ ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರ ಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರು ಆರೋಪಿಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅವರು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದ ಪಾವಿತ್ರ‍್ಯತೆ, ಸಮಗ್ರತೆ ಮತ್ತು ಖ್ಯಾತಿಯನ್ನು ಸರಿಪಡಿಸಲಾಗದಂತೆ ಕಳಂಕ ತರುವ ಪ್ರಯತ್ನಗಳನ್ನು ಸಿಎಂ ಚಂದ್ರಬಾಬು ನಾಯ್ಡು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಚಂದ್ರಬಾಬು ನಾಯ್ಡು ಒಬ್ಬ ರೋಗಗ್ರಸ್ಥ ಮತ್ತು ಸುಳ್ಳು ಹೇಳುವುದನ್ನು ಕರಗತ ಮಾಡಿಕೊಂಡಿರುವ ವ್ಯಕ್ತಿ. ಕೋಟ್ಯಂತರ ಜನರ ನಂಬಿಕೆಗಳನ್ನು ಗಂಭೀರವಾಗಿ ಘಾಸಿಗೊಳಿಸುವಷ್ಟು ಕೆಳಮಟ್ಟಕ್ಕಿಳಿದಿದ್ದಾರೆ, ಕೇವಲ ರಾಜಕೀಯ ಉದ್ದೇಶಗಳಿಗಾಗಿ ನಾಯ್ಡು ಅವರ ನಾಚಿಕೆಯಿಲ್ಲದ ಸುಳ್ಳನ್ನು ಮತ್ತು ಸತ್ಯವನ್ನು ಹರಡುವ ಕಾರ್ಯ ವಾಗ್ದಂಡನೆಗೆ ಒಳಗಾಗುವುದು ಅನಿವಾರ್ಯವಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ದಾಂತೇವಾಡದಲ್ಲಿ ನಾಲ್ವರು ನಕ್ಸಲೀಯರ ಶರಣಾಗತಿ

ದಾಂತೇವಾಡ, ಸೆ. ೨೨: ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಮೂವರು ಮಹಿಳಾ ನಕ್ಸಲೀಯರು ಹಾಗೂ ಓರ್ವ ಪುರುಷ ನಕ್ಸಲ್ ಸೇರಿದಂತೆ ಒಟ್ಟು ನಾಲ್ವರು ನಕ್ಸಲೀಯರು ಶರಣಾಗಿದ್ದಾರೆ. ಇವರ ತಲೆ ಒಟ್ಟು ೨೦ ಲಕ್ಷ ರೂ.ಗಳ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು. ಇದರೊಂದಿಗೆ ಜೂನ್ ೨೦೨೦ ರಲ್ಲಿ ಪ್ರಾರಂಭಿಸಲಾದ ‘ಲೋನ್ ವರ್ರಟು' (ಸ್ಥಳೀಯ ಗೊಂಡಿ ಭಾಷೆಯಲ್ಲಿ ನಿಮ್ಮ ಮನೆಗೆ, ಗ್ರಾಮಕ್ಕೆ ಹಿಂತಿರುಗಿ) ಅಭಿಯಾನದ ಅಡಿಯಲ್ಲಿ ತಲೆಗೆ ಬಹುಮಾನ ಘೋಷಿಸಲಾದ ೧೮೭ ಸೇರಿದಂತೆ ಒಟ್ಟು ೮೭೨ ನಕ್ಸಲೀಯರು ಜಿಲ್ಲೆಯಲ್ಲಿ ಹಿಂಸಾಚಾರವನ್ನು ತೊರೆದಿದ್ದಾರೆ ಎಂದು ಅವರು ಹೇಳಿದರು ಇತ್ತೀಚಿನ ದಂಪತಿ ಸೇರಿದಂತೆ ನಾಲ್ವರು ನಕ್ಸಲೀಯರು ದಾಂತೇವಾಡದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಹಾಜರಾಗಿದ್ದು, ಪೊಳ್ಳು ಮತ್ತು "ಅಮಾನವೀಯ" ಮಾವೋವಾದಿ ಸಿದ್ಧಾಂತ ಮತ್ತು ಕಾನೂನುಬಾಹಿರ ಸಂಘಟನೆಯೊಳಗಿನ ಆಂತರಿಕ ಕಲಹ ತಮ್ಮಲ್ಲಿ ನಿರಾಸೆ ಉಂಟು ಮಾಡಿರುವುದಾಗಿ ಹೇಳಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ಹೇಳಿದ್ದಾರೆ. ಇವರಲ್ಲಿ ಹಂಗಾ ತಮೋ ಅಲಿಯಾಸ್ ತಮೋ ಸೂರ್ಯ (೩೭) ಮತ್ತು ಆತನ ಪತ್ನಿ ಆಯ್ತಿ ತಾತಿ (೩೫) ತಲೆಯ ಮೇಲೆ ತಲಾ ೮ ಲಕ್ಷ ರೂಪಾಯಿ ಬಹುಮಾನ ಘೋಷಸಲಾಗಿತ್ತು ೨೦೧೮ ರಲ್ಲಿ ಛತ್ತೀಸ್‌ಗಢ-ತೆಲಂಗಾಣ ಅಂತರರಾಜ್ಯ ಗಡಿಯಲ್ಲಿರುವ ಪಾಮ್ಡೆ (ಬಿಜಾಪುರ) ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ನಡೆದ ದಾಳಿಯಲ್ಲಿ ಅವರು ಭಾಗಿಯಾಗಿದ್ದಾರೆ. ಇತರ ಮೂವರು ಮಹಿಳಾ ನಕ್ಸಲೀಯರು ಕ್ರಮವಾಗಿ ೩ ಲಕ್ಷ ಮತ್ತು ೧ ಲಕ್ಷ ರೂಪಾಯಿ ಬಹುಮಾನವನ್ನು ಹೊಂದಿದ್ದರು.ಶರಣಾದ ನಾಲ್ವರಿಗೆ ತಲಾ ೨೫,೦೦೦ ರೂಪಾಯಿ ನೆರವು ನೀಡಲಾಗಿದ್ದು, ಸರ್ಕಾರದ ನೀತಿಯನ್ನು ಮತ್ತಷ್ಟು ಪುನರ್ವಸತಿ ಕಲ್ಪಿಸಲಾಗುವುದು ಎಂದು ರೈ ಹೇಳಿದರು.